ಮಾ.12, 13 ಸರ್ಕಾರಿ ನೌಕರರ ಕ್ರೀಡಾಕೂಟ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.10:- ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಇದೇ ಮಾ. 12 ಮತ್ತು 13 ರಂದು ನಗರದ ಚಾಮುಂಡಿ ವಿಹಾರ ಕ್ರೀಡಾಂಗಣಗಳಲ್ಲಿ ಜಿಲ್ಲಾಡಳಿತ, ಜಿಪಂ ಮೊದಲಾದವುಗಳ ಸಂಯುಕ್ತಾಶ್ರಯದಲ್ಲಿ ನಡೆಯಲಿದೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ. ಗೋವಿಂದರಾಜು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಮಾ. 12 ರಂದು ಬೆಳಗ್ಗೆ 10ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಉದ್ಘಾಟನೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಇನ್ನಿತರರು ಅತಿಥಿಗಳಾಗಿರುವರು.
ಬಳಿಕ, ಚಾಮುಂಡಿ ವಿಹಾರ ಕ್ರೀಡಾಂಗಣ ಸೇರಿದಂತೆ ವಿವಿಧ ಕ್ರೀಡಾಂಗಣಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ಮೊದಲಾದವು ನಡೆಯಲಿವೆ. ಮಾ. 13 ರ ಸಂಜೆ ನಾಲ್ಕಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಸಂಘದ ಪದಾಧಿಕಾರಿಗಳಾದ ರಮೇಶ್‍ಕುಮಾರ್, ಗಿರೀಶ್, ಮಾಲಂಗಿ ಸುರೇಶ್, ರಘು, ಮಾಲೇಗೌಡ ಹಾಗೂ ರೇವಣ್ಣ ಹಾಜರಿದ್ದರು.