ತೋಟಕ್ಕೆ ಬೆಂಕಿ ಬಿದ್ದು ತೆಂಗು ಅಡಿಕೆ ಮಾವಿನ ಗಿಡಗಳು ನಾಶ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.10: ತಾಲ್ಲೂಕಿನ ದೊಡ್ಡಗಾಡಿಗನಹಳ್ಳಿ ಗ್ರಾಮದಲ್ಲಿ ಪ್ರಗತಿಪರ ರೈತರೊಬ್ಬರ ತೋಟಕ್ಕೆ ಬೆಂಕಿ ಬಿದ್ದು ತೆಂಗು,ಅಡಿಕೆ, ತೇಗ, ಮಾವು ಮುಂತಾದ ಗಿಡ ಮರಗಳು ಸುಟ್ಟು ಕರಕಲಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಗ್ರಾಮದ ಸುಬ್ಬೇಗೌಡರ ಮಗ ಡಿ.ಎಸ್.ಶಿವರಾಮೇಗೌಡ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದೆ. ತೋಟದಲ್ಲಿ ನೆಟ್ಟು ಬೆಳೆಸಿದ್ದ 1 ಸಾವಿರ ಅಡಿಕೆ ಸಸಿ, 35, ಮಾವಿನ ಗಿಡ, 130 ತೆಂಗಿನ ಗಿಡ, 300ಕ್ಕೂ ಅಧಿಕ ತೇಗದ ಗಿಡಗಳು ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಮಕ್ಕಳಂತೆ ಸಲುಹಿ ಬೆಳೆಸಿದ್ದ ಗಿಡಗಳು ಬೆಂಕಿಗೆ ಆಹಿತಿಯಾಗಿದೆ. ಯಾರೋ ಕಿಡಿಗೇಡಿಗಳೇ ಈ ಕೃತ್ಯ ವೆಸಗಿ ಇಡೀ ತೋಟವನ್ನು ಸ್ಮಶಾನದಂತಾಗಿಸಿದ್ದಾರೆ. ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಮಾಹಿತಿ ಕೇಳೀದಾಕ್ಷಣ ಊರವರ ಸಹಕಾರದಿಂದ ಬೆಂಕಿ ನಂದಿಸಲು ಪ್ರಯತ್ನಿಸಿದೆವು, ಆದರೂ ಗಿಡಗಳು ಸುಟ್ಟು ಕರಲಕಾಗುವುದನ್ನು ತಪ್ಪಿಸಲಾಗಲಿಲ್ಲ ಎಂದು ಕಣ್ಣೀರು ಹಾಕಿದರು.
ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ, ಪ್ರಗತಿ ಪರ ರೈತ ಶಿವರಾಮು ಅವರಿಗಾಗಿರುವ ತೊಂದರೆ ಎಲ್ಲರಿಗೂ ಆದಂತದ್ದು. ಸಂಭಂದಪಟ್ಟ ಇಲಾಖೆಯವರು ಸೂಕ್ತ ತನಿಖೆ ನಡೆಸಿ ರೈತನಿಗೆ ಹೆಚ್ಚಿನ ಪರಿಹಾರವನ್ನು ಕೊಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.