ಕರವೇ ಅಧ್ಯಕ್ಷರಾಗಿ ಶ್ರೀನಿವಾಸಗೌಡ ಆಯ್ಕೆ
ಸಂಜೆವಾಣಿ ವಾರ್ತೆ
ಕೆ.ಆರ್‍ಪೇಟೆ.ಮಾ.10: ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಗೌಡ ಅವರು ಆಯ್ಕೆಯಾಗಿದ್ದಾರೆ.
ಈ ಹಿಂದಿನ ತಾಲ್ಲೂಕು ಕರವೇ ಅಧ್ಯಕ್ಷರಾದ ಡಿ.ಎಸ್.ವೇಣು ಅವರು ಮಂಡ್ಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನಿರ್ದೇಶನದ ಮೇರೆಗೆ ಶ್ರೀನಿವಾಸಗೌಡ, ಅವರನ್ನು ಕೆ.ಆರ್.ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿ ಜಿಲ್ಲಾಧ್ಯಕ್ಷರಾದ ಡಿ.ಎಸ್.ವೇಣು ಆದೇಶ ಹೊರಡಿಸಿದ್ದಾರೆ.
ನೂತನ ಅಧ್ಯಕ್ಷ ಶ್ರೀನಿವಾಸಗೌಡ, ಅವರನ್ನು ಅಭಿನಂದಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ಡಿ.ಎಸ್.ವೇಣು ಅವರು ಸುಮಾರು 9 ವರ್ಷಗಳ ಕಾಲ ಕೆ.ಆರ್.ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕನ್ನಡ, ನಾಡು, ನುಡಿ ಹಾಗೂ ಸಾಮಾಜಿಕ ಸಮಸ್ಯೆಗಳ ವಿರುದ್ದ ಹೋರಾಟ ಮಾಡಲು ಅವಕಾಶ ಮಾಡಿಕೊಟ್ಟು ಈಗ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿರುವ ನನ್ನ ಮಾರ್ಗದರ್ಶಕರು, ಕನ್ನಡ ತಾಯಿ ಭುವನೇಶ್ವರಿ ದೇವಿಯ ವರಪುತ್ರರು, ಹುಟ್ಟು ಹೋರಾಟಗಾರರು, ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರಿಗೆ ನಾನು ಆಭಾರಿಯಾಗಿರುತ್ತೇನೆ. ನನಗೆ ನೀಡಿರುವ ಅಧಿಕಾರದ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕರವೇ ಘಟಕಗಳನ್ನು ಮತ್ತಷ್ಟು ಗಟ್ಟಿಯಾಗಿ ಬಲಪಡಿಸಲು ನನ್ನ ಶಕ್ತಿ ಮೀರಿ ಶ್ರಮಿಸುತ್ತೇನೆ. ಅದೇ ರೀತಿ ಕೆ.ಆರ್.ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀನಿವಾಸ್ ಗೌಡ, ಅವರು ಉತ್ತಮ ಸಂಘಟಕರಾಗಿದ್ದು ನನ್ನ ಎಲ್ಲಾ ಹೋರಾಟಗಳಿಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇವರ ಸಂಘಟನಾ ಶಕ್ತಿಯನ್ನು ಗುರುತಿಸಿ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಶ್ರೀನಿವಾಸ್ ಗೌಡ ಅವರನ್ನು ನೇಮಕ ಮಾಡುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ತಾಲ್ಲೂಕು ಕರವೇ ಪದಾಧಿಕಾರಿಗಳ ಸಭೆ ನಡೆಸಿ ಎಲ್ಲರ ಒಪ್ಪಿಗೆ ಮೇರೆಗೆ ತಾಲ್ಲೂಕು ಕರವೇ ಘಟಕದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಡಿ.ಎಸ್.ವೇಣು ತಿಳಿಸಿದರು.
ತಾಲ್ಲೂಕು ಕರವೇ ಘಟಕದ ನೂತನ ಅಧ್ಯಕ್ಷ ಶ್ರೀನಿವಾಸಗೌಡ ಮಾತನಾಡಿ ಸಾಮಾನ್ಯ ಕರವೇ ಕಾರ್ಯಕರ್ತನಾದ ನನ್ನನ್ನು ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ರಾಜ್ಯಾಧ್ಯಕ್ಷರಾದ ನಾರಾಯಣಗೌಡರು ಹಾಗೂ ಜಿಲ್ಲಾಧ್ಯಕ್ಷರಾದ ವೇಣು ರವರ ಆಶಯದಂತೆ ತಾಲ್ಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಸಂಘಟಿಸಿ, ಸದೃಢಗೊಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕರವೇ ಉಪಾಧ್ಯಕ್ಷ ಸಾಸಲು ಗುರುಮೂರ್ತಿ, ತಾಲ್ಲೂಕು ಕರವೇ ಪದವೀಧರ ಘಟಕದ ಅಧ್ಯಕ್ಷ ಸಿ.ಬಿ.ಚೇತನ್ ಕುಮಾರ್, ಪ್ರಥಮದರ್ಜೆ ಗುತ್ತಿಗೆದಾರರು ಹಾಗೂ ಸಮಾಜ ಸೇವಕರಾದ ಎ.ಪಿ.ಕೇಶವಗೌಡ, ಮಾಕವಳ್ಳಿ ಕುಮಾರಸ್ವಾಮಿ, ಕರವೇ ನಗರ ಘಟಕದ ಅಧ್ಯಕ್ಷ ಮದನ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿಗಳಾದ ಸ್ವಾಮಿ, ಹೊಸಹೊಳಲು ಗೋಪಿ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಆನಂದ್, ಯುವ ಕಾರ್ಯದರ್ಶಿ ಮನು, ಸೇರಿದಂತೆ ಹಲವರು ಉಪಸ್ಥಿತರಿದ್ದರು.