ಕಾಂಡಕೊರಕ ಜೀರುಂಡೆ, ಮುಳ್ಳುಹಂದಿಗಳ ಕಾಟ: ಸಂಕಷ್ಟದಲ್ಲಿ ತೆಂಗು ಬೆಳೆಗಾರರು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ. ಮಾ.10:- ತಾಲೂಕಿನಾದ್ಯಂತ ತೆಂಗಿನ ಸಸಿಗಳಿಗೆ ಕಾಂಡ ಕೊರಕ ಜೀರುಂಡೆಗಳು ಮತ್ತು ಮುಳ್ಳು ಹಂದಿಗಳ ಕಾಟ ಕಾಣಿಸಿಕೊಂಡಿದ್ದು ತೆಂಗು ಬೆಳೆಗಾರರು ಸಂಕಷ್ಠಕ್ಕೆ ಸಿಲುಕಿದ್ದಾರೆ.
ಕೆ.ಆರ್.ಪೇಟೆ ತಾಲೂಕು ರಾಜ್ಯದ ಪ್ರಮುಖ ತೆಂಗು ಬೆಳೆ ಕ್ಷೇತ್ರವಾಗಿ ಬೆಳೆಯುತ್ತಿದೆ. ತಾಲೂಕಿನ ಕೆರೆ ಬಯಲು ಮತ್ತು ಹೇಮಾವತಿ ನದಿಯ ಒಡ್ಡು ನಾಲೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲಾ ವ್ಯಾಪ್ತಿಯಲ್ಲಿ ರೈತರು ಲಾಭದಾಯಕವಲ್ಲದ ಕಬ್ಬು ಮತ್ತು ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದು ತೆಂಗು ಮತ್ತು ಅಡಿಕೆ ಕೃಷಿಯತ್ತ ಸಾಗುತ್ತಿದ್ದಾರೆ. ಹೇಮಾವತಿ ಎಡದಂಡೆ ಮುಖ್ಯ ನಾಲೆಯ ಅರೆ ನೀರಾವರಿ ಪ್ರದೇಶದಲ್ಲೂ ತೆಂಗು ಬೆಳೆ ವಿಸ್ತಾರಗೊಳ್ಳುತ್ತಿದೆ. ತೋಟಗಾರಿಕಾ ಇಲಾಖೆಯ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ ಪ್ರಸ್ತುತ 28 ಸಾವಿರ ಹೆಕ್ಟೇರ್‍ಗೂ ಹೆಚ್ಚಿನ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ತಾಲೂಕು ಅಡಿಕೆ ಪ್ರದೇಶಕ್ಕೆ ಸೇರದಿರುವ ಕಾರಣ ಅಡಿಕೆ ಬೆಳೆಯ ಸಮಗ್ರ ಮಾಹಿತಿ ತೋಟಗಾರಿಕಾ ಇಲಾಖೆಯಲ್ಲಿ ಇಲ್ಲ. ಆದರೆ 10 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ರೈತರು ಅಡಿಕೆ ಬೇಸಾಯ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಕೆ.ಆರ್.ಪೇಟೆ ಮತ್ತು ಕಿಕ್ಕೇರಿ ಎ.ಪಿ.ಎಂ.ಸಿ ಯಲ್ಲಿ ತೆಂಗಿನ ಕಾಯಿ, ಎಳನೀರು ಮಾರಾಟದ ಜೊತೆಗೆ ಅಡಿಕೆ ಮಾರುಕಟ್ಟೆಯೂ ವಿಸ್ತಾರಗೊಳ್ಳುತ್ತಿದೆ. ಅಡಿಕೆ ಸಂಸ್ಕರಣಾ ಘಟಕಗಳೂ ಗ್ರಾಮೀಣ ಪ್ರದೇಶದಲ್ಲಿ ತಲೆಯೆತ್ತುತ್ತಿವೆ.
ಭತ್ತ ಮತ್ತು ಕಬ್ಬಿನ ಬೇಸಾಯ ತ್ಯಜಿಸಿ ತೆಂಗು ಮತ್ತು ಅಡಿಕೆ ಬೇಸಾಯದತ್ತ ಮುಖ ಮಾಡಿರುವ ರೈತರಿಗೆ ಕಾಂಡ ಕೊರಕ ಜೀರುಂಡೆಗಳ ಕಾಟ ಮತ್ತು ಮುಳ್ಳುಹಂದಿಗಳ ಹಾವಳಿಯಿಂದ ತಮ್ಮ ಅಡಿಕೆ ಮತ್ತು ತೆಂಗಿನ ಸಸಿಗಳನ್ನು ಸಂರಕ್ಷಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. 4-5 ವರ್ಷದ ತೆಂಗಿನ ಸಸಿಗಳ ಬುಡವನ್ನು ತಿಂದು ಹಾಕುವ ಜೀರುಂಡೆಗಳು ತೆಂಗಿನ ಕಾಂಡದಲ್ಲಿಯೇ ಮೊಟ್ಟೆಯಿಟ್ಟು ಮರಿ ಮಾಡಿ ಬೆಳೆಯುತ್ತಿರುವ ತೆಂಗಿನ ಸಸಿಗಳು ಸುಳಿ ಸಮೇತ ಒಣಗಿ ಹೋಗುವಂತೆ ಮಾಡುತ್ತಿವೆ. ಬಲಿಷ್ಠ ತೆಂಗಿನ ಸಸಿಗಳ ಬುಡವನ್ನು ಕಾಡುಹಂದಿಗಳು ಕತ್ತರಿಸಿ ಹಾಕುತ್ತಿವೆ. ಕ್ಷೇತ್ರದಲ್ಲಿಂದು ತೀವ್ರ ಬರಗಾಲ ಕಾಣಿಸಿಕೊಂಡಿದೆ. ಹೇಮಾವತಿ ನಾಲೆಗಳಲ್ಲಿ ನೀರು ಹರಿಯುತ್ತಿಲ್ಲ. ಬಿರು ಬಿಸಿಲಿಗೆ ಅಂತರ್ಜಲವೂ ಭತ್ತಿ ಹೋಗುತ್ತಿದ್ದು ಪಂಪ್‍ಸೆಟ್ ಅಧಾರಿತ ರೈತರು ತೆಂಗು ಬೆಳೆಯನ್ನು ಸಂರಕ್ಷಿಸಿಕೊಳ್ಳುಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೀಟ ಮತ್ತು ಕಾಡು ಪ್ರಾಣಿಗಳ ಭಾದೆಯಿಂದ ತೆಂಗು ಬೆಳೆಗಾರರು ಚಿಂತೆಗೊಳಗಾಗಿದ್ದಾರೆ. ಜೀರುಂಡೆ ಮತ್ತು ಮುಳ್ಳು ಹಂದಿಗಳ ಭಾದೆಯಿಂದ ರೈತರ ಸಾವಿರಾರು ತೆಂಗಿನ ಗಿಡಗಳು ಈಗಾಗಲೇ ನಾಶವಾಗಿವೆ.
ಕಣ್ಣ ಮುಂದೆಯೇ ರೈತರ ತೆಂಗಿನ ಗಿಡಗಳು ನಾಶವಾಗುತ್ತಿದ್ದರೆ ಇದಕ್ಕೆ ಸೂಕ್ತ ಪರಿಹಾರೋಪಾಯ ನೀಡಬೇಕಾದ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ದಿವ್ಯ ನಿರ್ಲಕ್ಷ್ಯದಲ್ಲಿವೆ. ಜೀರುಂಡೆಗಳ ನಿಯಂತ್ರಣಕ್ಕೆ ಮೋಹಕ ಬಲೆಯ ಅಳವಡಿಕೆ ಮತ್ತು ಟ್ರ್ಯಾಕ್ ಡಬ್ಬಿ ಅಳವಡಿಕೆಯ ಕ್ರಮವನ್ನು ಕೆಲವು ರೈತರು ಅನುಸರಿಸುತ್ತಿದ್ದಾರೆ. ಟ್ರ್ಯಾಕ್ ಡಬ್ಬಕ್ಕೆ ಒಂದು ಬಗೆಯ ಸುವಾಸನೆಯುಕ್ತ ದ್ರಾವಣವನ್ನು ಹಾಕಿದರೆ ಜೀರುಂಡೆಗಳು ಸುವಾಸನೆಗೆ ಆಕರ್ಷಿತವಾಗಿ ಬಂದು ಡಬ್ಬಿಯಲ್ಲಿ ಬೀಳುತ್ತವೆ. ಜೀರುಂಡೆಗಳನ್ನು ಆಕರ್ಷಿಸುವ ಟ್ರ್ಯಾಕ್ ಡಬ್ಬಿಗಳನ್ನು ಪ್ರತಿ ಗಿಡಕ್ಕೂ ಅಳವಡಿಸಬೇಕು.ಈಗಾಗಲೇ ರೈತ ಕೆ.ಟಿ.ಗಂಗಾಧರ್ ಎಂಬುವವರು ಪ್ರಾಯೋಗಿಕವಾಗಿ ಅಳವಡಿಸಿದ್ದಾರೆ ಆದರೆ ಒಬ್ಬರು ಅಳವಡಿಸಿಕೊಂಡರೆ ಪ್ರಯೋಜನವಿಲ್ಲ ಅಕ್ಕಪಕ್ಕದವರೂ ಅಳವಡಿಸಿದರೆ ಮಾತ್ರ ನಿಯಂತ್ರಿಸಬಹುದು ಎನ್ನುತ್ತಾರೆ ಗಂಗಾಧರ್. ಖಾಸಗಿಯವರಲ್ಲಿ ಈ ಡಬ್ಬಿಗಳನ್ನು ಕೊಂಡುಕೊಳ್ಳಬೇಕಾದರೆ ರೈತ ಪ್ರತಿ ಡಬ್ಬಿಗೆ 300 ರಿಂದ 400 ರೂ ಪಾವತಿಸಬೇಕು. ಇದು ರೈತರಿಗೆ ಅಧಿಕ ವೆಚ್ಚದ ಹೊರೆಯಾಗುತ್ತಿದೆ. ಮುಳ್ಳು ಹಂದಿಗಳ ಕಾಟದ ನಿಯಂತ್ರಣಕ್ಕೆ ಪರಿಹಾರವೇ ಇಲ್ಲದಂತಾಗಿದೆ. ತೆಂಗಿನ ಸಸಿಗಳನ್ನು ಕೀಟ ಮತ್ತು ಮುಳ್ಳು ಹಂದಿಗಳ ಕಾಟದಿಂದ ಕಾಪಾಡಲು ರೈತರು ಅನುಸರಿಸಬೇಕಾದ ವಿಧಾನಗಳ ಬಗ್ಗೆ ತೋಟಗಾರಿಕೆ ಯಾವುದೇ ಮಾರ್ಗದರ್ಶನ ನೀಡುತ್ತಿಲ್ಲ. ರಾಜ್ಯದಲ್ಲಿ ತೆಂಗು ಅಭಿವೃದ್ದಿ ಮಂಡಲಿಯಿದ್ದರೂ ಅದು ತೆಂಗು ಬೆಳೆಗಾರರ ನೆರವಿಗೆ ಬರುತ್ತಿಲ್ಲ. ತೆಂಗು ಬೆಳೆಯ ಸಂರಕ್ಷಣೆಯ ದೃಷ್ಠಿಯಿಂದ ರಾಜ್ಯ ಸರ್ಕಾರ ತೆಂಗು ಬೆಳೆಗಾರರ ಸಮಸ್ಯೆಯ ಪರಿಹಾರಕ್ಕೆ ಗಂಭೀರ ಪ್ರಯತ್ನ ಮಾಡಬೇಕು. ಕೃಷಿ, ತೋಟಗಾರಿಕೆ ಮತ್ತು ತೆಂಗು ಅಭಿವೃದ್ದಿ ಮಂಡಲಿಗಳು ಸಂಯುಕ್ತವಾಗಿ ಸೇರಿ ಪರಿಹಾರೋಪಾಯಗಳನ್ನು ಕಂಡು ಹಿಡಿಯಬೇಕು. ಜೀರುಂಡೆಗಳ ನಿಯಂತ್ರಣಕ್ಕೆ ಅಳವಡಿಸುವ ಟ್ರ್ಯಾಕ್ ಡಬ್ಬಗಳಿಗೆ ಸಹಾಯ ಧನ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
ತೆಂಗಿನ ಬೇಸಾಯಗಾರರನ್ನು ಕಾಡುತ್ತಿರುವ ಕೀಟ ಭಾದೆ ಮತ್ತು ಕಾಡು ಪ್ರಾಣಿಗಳ ಹಾವಳಿ ತುಂಬಾ ಗಂಭೀರವಾದುದು. ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರೇ ರಾಜ್ಯದ ಕೃಷಿ ಸಚಿವರಾಗಿದ್ದಾರೆ. ಕೃಷಿ ಸಚಿವರ ತವರಿನಲ್ಲಿಯೇ ತೆಂಗು ನೆಲ ಕಚ್ಚುತ್ತಿದ್ದರೂ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ರೈತರ ನೆರವಿಗೆ ಧಾವಿಸದೆ ನಿಷ್ಕ್ರಿಯವಾಗಿರುವುದು ದುರ್ಧೈವದ ಸಂಗತಿ. ತಕ್ಷಣವೇ ಕೃಷಿ ಸಚಿವರು ಇಲಾಖಾ ಅಧಿಕಾರಿಗಳ ಸಭೆ ಕರೆದು ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಅಸಡ್ಡೆಯ ಮನೋಭಾವವನ್ನು ಹೊಂದಿರುವ ಅಧಿಕಾರಿಗಳನ್ನು ಸ್ಥಳಾಂತರಿಸಿ ರೈತಪರವಾದ ಕಾಳಜಿಯುಳ್ಳ ಅಧಿಕಾರಿಗಳನ್ನು ಕರೆದುಕೊಂಡು ಬರಬೇಕಲ್ಲದೆ ಸ್ಥಗಿತಗೊಂಡಿರುವ ಸಹಾಯ ಧನದ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದ್ದಾರೆ.
ಅಭಿಪ್ರಾಯಗಳು:
ತೆಂಗಿನ ಮರಗಳಿಗೆ ಜೀರುಂಡೆ ಕಾಟ ಇಂದು ನೆನ್ನೆಯದಲ್ಲ. ಇದರ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ ರೈತರಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದೆ. ಪ್ರತಿ ಎಕರೆಗೆ 2 ಸೆಟ್ ಮೋಹಕ ಬಲೆ ಬೇಕಾಗುತ್ತದೆ. ಇದನ್ನು ಇಲಾಖೆಯ ವತಿಯಿಂದ ಸಹಾಯ ಧನದ ಮೂಲಕ ವಿತರಿಸಲಾಗುತ್ತಿದೆ. ಟ್ರ್ಯಾಕ್ ಡಬ್ಬಿಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ. 40 ಮತ್ತು ಪರಿಶಿಷ್ಠ ಜಾತಿ ವರ್ಗದ ರೈತರಿಗೆ ಶೇ.50 ಸಹಾಯ ಧನ ನೀಡಲಾಗುತ್ತಿದೆ. ಇಲಾಖೆಯಿಂದ ಸೂಚಿತವಾದ ಕೇಂದ್ರಗಳಿಂದಲೇ ಕೊಂಡುಕೊಂಡ ರೈತರಿಗೆ ಮಾತ್ರ ಸಹಾಯ ಧನದ ಸೌಲಭ್ಯ ದೊರಕುತ್ತದೆ ಎಂದಿರುವ ತಾಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಡಿ.ಲೋಕೇಶ್ ಮುಳ್ಳು ಹಂದಿಗಳ ಹಾವಳಿ ಇತ್ತೀಚೆಗೆ ಕಾಣಿಸಿಕೊಂಡಿದ್ದು ಯಾವುದೇ ರೈತರು ಇದುವರೆಗೆ ಇಲಾಖೆಗೆ ಮಾಹಿತಿ ನೀಡಿಲ್ಲ ಎಂದಿದ್ದಾರೆ.