ವಿದ್ಯಾರ್ಥಿಗಳಲ್ಲಿ ಭಾಷಾ ಸಂವಹನ ಸಾಮರ್ಥ್ಯ ಬೆಳೆಸಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೯: ವಿದ್ಯಾರ್ಥಿಗಳಲ್ಲಿ ಭಾಷಾ ಸಂವಹನ ಸಾಮರ್ಥ್ಯ ಕೌಶಲ ಬೆಳೆಸಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ಡಿ.ಎಸ್.ಇ.ಆರ್.ಟಿ ಮತ್ತು ಸಿ.ಟಿ.ಇ(ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ) ಚಿತ್ರದುರ್ಗ ವತಿಯಿಂದ ಜಿಲ್ಲೆಯ ಎಲ್ಲಾ ಸಿ.ಆರ್.ಪಿ(ಸಮೂಹ ಸಂಪನ್ಮೂಲ ವ್ಯಕ್ತಿ)ಗಳಿಗೆ ಗುರುವಾರ ಆಯೋಜಿಸಿದ್ದ ಇಂಗ್ಲೀಷ್ ಭಾಷಾ ಸಂವಹನ ಸಾಮರ್ಥ್ಯ ಕೌಶಲ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಮಕ್ಕಳಿಗೆ ಪ್ರಾರಂಭಿಕ ಹಂತದಲ್ಲಿಯೇ ಭಾಷಾ ಕೌಶಲಗಳಲ್ಲಿ ಸಾಮರ್ಥ್ಯ ಬೆಳೆಸಬೇಕು ಇದರಿಂದ ಇತರೆ ವಿಷಯಗಳನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ ಎಂದರು. ನೋಡಲ್ ಅಧಿಕಾರಿ ಎನ್.ರಾಘವೇಂದ್ರ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇಂಗ್ಲೀಷ್ ಭಾಷಾ ಜ್ಞಾನವು ಅಗತ್ಯವಾಗಿದೆ. ಭಾಷೆಯನ್ನು ಯಾಂತ್ರಿಕವಾಗಿ ಕಲಿಸದೆ ಮಕ್ಕಳಿಗೆ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವ ಕೌಶಲದ ಜತೆಗೆ ಇಂಗ್ಲೀಷ್ ಭಾಷೆಯಲ್ಲಿ ಸಂವಹನ ಕೌಶಲ ಬೆಳೆಸಬೇಕು. ಪ್ರಾಥಮಿಕ ಹಂತದಲ್ಲಿ ಸಂವಹನ ಸಾಮರ್ಥ್ಯ ಬೆಳೆಸಿದರೆ ಉನ್ನತ ಶಿಕ್ಷಣದಲ್ಲಿ ಯಶಸ್ಸು ಗಳಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ಉಪನ್ಯಾಸಕರಾದ ಬಿ.ಎಸ್.ನಿತ್ಯಾನಂದ, ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ವೆಂಕಟೇಶಮೂರ್ತಿ, ಪ್ರಕಾಶ್, ರಾಧಾ ಮತ್ತು ಸಿ.ಅರ್.ಪಿಗಳು ಇದ್ದರು.