ಎಷ್ಟೊಂದು ಅರ್ಥಪೂರ್ಣ ಅನ್ನಿಸಿದ  ನೈಜ  ಘಟನೆ :
ಬೆಂಗಳೂರು ಮಹಾನಗರಕ್ಕೆ ಬಂದು ಏಳೆಂಟು ತಿಂಗಳಾದರೂ ಈ ನಡುವೆ ಬಂದ   ಹಬ್ಬಗಳನ್ನು  ನಾನು ಇಲ್ಲಿ ಮಾಡದೆ ದಾವಣಗೆರೆಗೆ ಬಂದು ಮಾಡುತಿದ್ದೆನು. ಆದರೆ ಪರೀಕ್ಷಾ ಸಮಯ ಒಂದೇ  ದಿನ ರಜೆ! ಹೋಗಿ ಬರುವುದು ಶ್ರಮದಾಯಕ  ಎಂದು ಶಿವರಾತ್ರಿಯಂದು ಬೆಂಗಳೂರಿನಲ್ಲೇ ಉಳಿದೆ. ಮಗ ಯಾವಾಗಲೂ “ಅಮ್ಮ ಈ ಲೇಔಟ್  ನಲ್ಲಿರುವ ದೇವಸ್ಥಾನಗಳನ್ನು ನಿನಗೆ ತೋರಿಸ್ತೀನಿ ಬಾ” ಎಂದು ಸದಾ ಕರೆಯುತಿದ್ದ. ಶಾಲಾ ಕರ್ತವ್ಯ , ಅಕ್ಷರ ಕಾಯಕ, ಕೌಟುಂಬಿಕ ಜವಾಬ್ದಾರಿಗಳ ನಡುವೆ ಸದಾ ಮುಳುಗಿರುತಿದ್ದ ನನಗೆ   ಯಾವಾಗಲೂ  ದೇವಸ್ಥಾನಗಳಿಗೆ ಹೋಗಿ ಬರುವಷ್ಟು ಸಮಯ ಇರುತ್ತಿರಲಿಲ್ಲ! ಸಾಮಾನ್ಯವಾಗಿ ದಾವಣಗೆರೆಯಲ್ಲಿ ಇರುವವರೆಗೂ ನನ್ನ ಬಹುತೇಕ  ಹಬ್ಬಗಳು ವಿದ್ಯಾರ್ಥಿಗಳ ಜೊತೆ ಶಾಲಾಂಗಣ ಇಲ್ಲವೇ  ತರಗತಿ ಕೋಣೆಯೊಳಗೆ ಪಾಠ ಕಲಿಕೆ  ಮಾಡಿಸುವುದರಲ್ಲೇ  ಆಗುತಿದ್ದುದೇ ನಿಜ.  ನಾನೇ ಕೆಲವೊಮ್ಮೆ  ಬಹಳ ಅಪರೂಪಕ್ಕೆ  ಬಿಡುವು ಪಡೆದು ದೇವಸ್ಥಾನಗಳಿಗೆ  ಹೋಗುತಿದ್ದೆ ! ಸ್ಕೂಲ್ ಕೆಲಸ ಓಡಾಟದ ಆಯಾಸದ ಮಧ್ಯೆ ನನಗೆ  ಹೋಗಲು ಈ ನಡುವೆ  ಆಗಿರಲಿಲ್ಲ. ಆದರೆ ಶಿವರಾತ್ರಿ ದಿನದ  ಮಕ್ಕಳಿಗೆ ಸಂಜೆ ದೇವಸ್ಥಾನಕ್ಕೆ ಹೋಗಿಬರೋಣ ಎಂದೆ.ಮಕ್ಕಳಿಬ್ಬರ  ಜೊತೆ ಮನೆಯ ಹತ್ತಿರವಿದ್ದ ಗಣೇಶ, ಶಿವ ದೇವಸ್ಥಾನಕ್ಕೆ ಹೋದೆ. ಬೆಂಗಳೂರಿನ ಮಹಾನಗರದ ದೇವಸ್ಥಾನದ ಪೂಜಾ ವಿಧಿ ವಿಧಾನಗಳು ನನಗೆಂದೂ  ಅನುಭವ ಆಗದ  ಕಾರಣ ಜೊತೆಗೆ ಹತ್ತಿರದಲ್ಲಿ  ಹೂಪತ್ರೆಗಳು ಸಿಗದ ಕಾರಣ ಹಾಗೆ  ಬರಿಗೈಯಲ್ಲಿಯೇ  ಭಕ್ತಿ ಭಾವ ಮುಖ್ಯ ಎಂದುಕೊಂಡು ದೇವಸ್ಥಾನಕ್ಕೆ ಹೋದೆವು! ಗಣೇಶ, ಈಶ್ವರ ದೇವರಿಗೆ  ಸರಳವಾಗಿ ಅಲಂಕರಿಸಿ ಪೂಜಿಸಲಾಗಿತ್ತು. ಕೈ ಮುಗಿದೆವು.ಸ್ವಲ್ಪ ಹೊತ್ತು ಕುಳಿತು ಕೊಂಡೆವು. ಹುಂಡಿ ಕಾಣಿಸಿತು. ಹಾಕೋಣವೇ ದಕ್ಷಿಣೆ ಅನ್ನಿಸಿತು! ಮತ್ತೊಂದು  ಕ್ಷಣ ವ್ಯವಸ್ಥೆ ನೆನೆದು ಬೇಡವೆನಿಸಿತು!  ಗೋಡೆಯ  ಮೇಲಿನ ಫಲಕದ ಬರಹ ಓದಿದೆ ! ಅರ್ಚನೆ 21 ರೂ, ಸತ್ಯನಾರಾಯಣ ಪೂಜೆ 100 ರೂ ಅಭಿಷೇಕ ವಿತ್ ಪ್ರಸಾದ 250 ಹೀಗೆ ಹತ್ತಾರು ಪೂಜಾ ವಿಧಾನಕ್ಕೆ ಇಂತಿಷ್ಟು,,,,  ಎಂದು ಬೆಲೆ ನಿಗದಿ ಮಾಡಿದ್ದರು! ಹಣ್ಣು -ಕಾಯಿ ; ಹೂವು – ಬತ್ತಿ   ಅಂತ ಏನೊಂದು ಪೂಜೆಗೆ ತಗೆದುಕೊಂಡು ಹೋಗದ ನಾವು 21 ರೂ ನೀಡಿದರೆ ಹೆಸರು ಹೇಳಿ   ಅರ್ಚನೆ ಮಾಡುತ್ತಾರೆಂದು  ವಿಚಾರಿಸಿ ತಿಳಿದು,  21 ರೂ ಚೇಂಜ್ ಇರದ  ಕಾರಣ, ನೂರು ರೂಪಾಯಿ ನೋಟ್  ನೀಡಿದೆ. ಅರ್ಚಕರು ಆ ಕಡೆ ಈ ಕಡೆ ಓಡಾಡಿ ,,,ಅರ್ಚನೆ ಮುಗಿಯಿತು  ಎಂದರು! ಅಚ್ಚರಿಯಾಗಿ, ನೀವು ಅರ್ಚನೆ ಮಾಡಿದ್ದು  ನಮಗೆ ಗೊತ್ತಾಗಲೇ ಇಲ್ಲ ಎಂದೆ! ಸಿಡುಕ ತೊಡಗಿದರು ಅರ್ಚಕರು! ನಾನು ಮೈಕ್  ಹಿಡಿದು ಮಾಡ್ತೀನಿ ತಡೀರಿ ಅಂದರು ! ವಿಚಿತ್ರ ಅನ್ನಿಸಿತು ! ಆತನ ನಡೆ ಭವಿತನದಿಂದ ಕೂಡಿತ್ತು ! ನಮಗೆ ಅರ್ಚನೆ ಫೀ 21 ರೂ ತಗಂಡು ಉಳಿದ ಚೇಂಜ್ ಕೊಡಿ ಅಂದೆ .ಎಷ್ಟು ಕೊಟ್ಟಿದ್ರಿ ಎಂದರು ಆತ! ಮತ್ತಷ್ಟು ಬೇಸರ ಆಯಿತು. ನೂರು ರೂ ನೀಡಿದ್ದು  ಎಂದೆ. ತಗೋಳಿ ಚೇಂಜ್ ಅಂತ ಆರತಿ  ತಟ್ಟೆ ಚಾಚಿದರು ! ನೀವೇ ತೆಗೆದು ಕೊಡಿ ಎಂದೆ! ಕೋಪದಿಂದ  ವಟಗುಟ್ಟುತ್ತಾ ತೆಗೆದು ಕೊಟ್ಟರು  ಅರ್ಚಕರು!   ಗಣೇಶ ಶಿವ ದೇವರುಗಳ  ನೋಡಿದೆ ! ದೇವರುಗಳ  ಮುಖದಲ್ಲಿ  ನಾನು ಮೂರ್ಖಳೆಂದು ಸೂಚಿಸುವ ಮುಗುಳ್ನಗು ಕಂಡಂತೆ ಅನುಭವವಾಯಿತು! ನಾನು ನಮ್ಮ ಮಕ್ಕಳು ಮೌನದಲ್ಲಿ  ಮನೆಗೆ ಬಂದು ಬಾಗಿಲು ತೆಗೆದೆವು! ನನ್ನ ಮಗ  ಧ್ಯಾನಿಸಿ ಪ್ರಾರ್ಥನೆಗೈಯುತ್ತಾ ಹಚ್ಚಿದ ಮನೆಯ ದೇವರ ಮುಂದಿನ ದೀಪ  ಇನ್ನೂ ಶೋಭಾಯಮಾನವಾಗಿ ಉರಿಯುತಿತ್ತು! ದೇವಸ್ಥಾನಕ್ಕಿಂತ ಮನೆಯ ಬೆಳಕು ಅಪ್ಯಾಯ ಎನಿಸಿತು!  ಬೆಳಗಿನಿಂದ ಮಾಡಿದ  ಮನೆ ಸ್ವಚ್ಛತೆಯು ಗಮನ ಸೆಳೆಯಿತು. ಒಣಕಸ ಹಸಿಕಸ ತುಂಬಿದ   ಪ್ರತ್ಯೇಕ   ಡಬ್ಬಿಗಳು ,,,,   ಅದನ್ನು ನಿತ್ಯ ಗಾಡಿಯಲ್ಲಿ ಹೊತ್ತುಯ್ಯುವ ಮಾನವತಾ ಮನಸ್ಸುಗಳು ದೇವರೆನ್ನಿಸಿದವು !   ಕ್ಷಣ ಕಣ್ಮುಚ್ಚಿ ಕುಳಿತೆ! ತಾಯ್ತಂದೆ ಗುರುಹಿರಿಯರ ನೆನೆದೆ ! ಶಾಲಾ ವಿದ್ಯಾರ್ಥಿಗಳು  ಚಂದ ಪರೀಕ್ಷೆ ಬರೆಯಲು ಪೂರ್ವಭಾವಿಯಾಗಿ ನಾನು  ಇನ್ನೂ ಏನೇನು ಮಾಡಲು ಸಾಧ್ಯ !?  ಎಂದು ವೃತ್ತಿ  ಸೇವೆ ಬಗ್ಗೆ ಚಿಂತಿಸಿದೆ,,,,  ಬೇಸರವೆಲ್ಲ ಕರಗಿ  ಸಮಾಧಾನ ಅನ್ನಿಸಿತು!  ಇರುವೆಡೆಯೇ ದೇವರ ಕಾಣುವ ಪರಿ; ಕಾಯಕ ಧರ್ಮದ ಸಿರಿ ಮತ್ತಷ್ಟೂ  ಅರಿವಿನಿಂದ ಪಾಠವಾಯಿತು ! ಮನಸ್ಸು ನಿರಾಳತೆ ಪಡೆಯಿತು!
*****************************
ಶ್ರೀಮತಿ //
ಎ.ಸಿ.ಶಶಿಕಲಾ ಶಂಕರಮೂರ್ತಿ ,
ಶಿಕ್ಷಕಿ,ಸಾಹಿತಿ,
ದಾವಣಗೆರೆ