ಮಂಡಲ ಬಿಜೆಪಿ ಘಟಕ ರದ್ದುಗೊಳಿಸುವವರೆಗೂ ಸಭೆ, ಸಮಾರಂಭಗಳಲ್ಲಿ ಭಾಗವಹಿಸದಿರಲು ಕರುಣಾಕರರೆಡ್ಡಿ ಬೆಂಬಲಿಗರ ತೀರ್ಮಾನ.
ಸಂಜೆವಾಣಿವಾರ್ತೆ
ಹರಪನಹಳ್ಳಿ.ಮಾ.10; ತಾಲೂಕು ಬಿಜೆಪಿ ಮಂಡಲ ಘಟಕವನ್ನು ಕೂಡಲೇ ರದ್ದು ಮಾಡಬೇಕು, ಅಲ್ಲಿಯವರೆಗೂ ಪಕ್ಷದ ಯಾವುದೇ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳದಿರಲು ನಮ್ಮ ಪಕ್ಷದ ಕಾರ್ಯಕರ್ತರು ತೀರ್ಮಾನ ಕೈಗೊಂಡಿದ್ದಾರೆ ಎಂದು ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ ತಿಳಿಸಿದರು.ಪಟ್ಟಣದ ಕೊಟ್ಟೂರು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ  ನಡೆದ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿಗೆ ನೂತನವಾಗಿ ರಚಿಸಿರುವ ಬಿಜೆಪಿ ಮಂಡಲ ಘಟಕದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕೈಬಿಟ್ಟು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಣೆ ಹಾಕಿದ್ದಾರೆ, ಈ ಬಗ್ಗೆ ಕಾರ್ಯಕರ್ತರಲ್ಲಿ ಬೇಸರವಿದೆ ಎಂದು ಹೇಳಿದರು.ವಿಜಯನಗರ ಜಿಲ್ಲಾ ಬಿಜೆಪಿ ಘಟಕಕ್ಕೆ ಹರಪನಹಳ್ಳಿಯಿಂದ ತೆಗೆದುಕೊಂಡಿರುವ ಪದಾಧಿಕಾರಿಗಳು ಸಹ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡವರೇ, ಈ ಬಗ್ಗೆಯೂ ಕೂಡ ಕಾರ್ಯಕರ್ತರಲ್ಲಿ ಅಸಮಾಧನ ಹಾಗೂ ನೋವು ಇದೆ ಎಂದು ತಿಳಿಸಿದರು. ಭಾರತೀಯ ಜನತಾ ಪಕ್ಷದ ರಾಜ್ಯದ್ಯಕ್ಷರು, ಪಕ್ಷದ ಮುಖಂಡರು ಈ ಬಗ್ಗೆ ಗಮನ ಹರಿಸಿ ಬಿಜೆಪಿ ಮಂಡಲ ಘಟಕವನ್ನು ಹಾಗೂ ಹರಪನಹಳ್ಳಿಯಿಂದ ಹೋಗಿರುವ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.ಈ ಕುರಿತು ಕಾರ್ಯಕರ್ತರು ಶೀಘ್ರವೇ ರಾಜ್ಯಾಧ್ಯಕ್ಷರ ಬಳಿ ನಿಯೋಗ ಹೋಗಿ ಇಲ್ಲಿಯ ಪಕ್ಷದ ಆಗು ಹೋಗುಗಳ ಬಗ್ಗೆ ತಿಳಿಸಲಿದ್ದಾರೆ, ಮಂಡಲ ಘಟಕ ರದ್ದಾಗುವವರೆಗೂ ತಾಲೂಕಿನಲ್ಲಿ ಮುಂದೆ ನಡೆಯುವ ಪಕ್ಷದ ಯಾವುದೇ ಸಭೆ, ಸಮಾರಂಭ ಅಥವಾ ಚುನಾವಣೆಗಳಲ್ಲಿ ಪಾಲ್ಗೊಳ್ಳದಿರಲು ಕಾರ್ಯಕರ್ತರು ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.