ಚಿತ್ತಾಪೂರ ತಾಲೂಕಿನ ಕರದಾಳ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಸಾವಿನ ಕುರಿತು ಸೂಕ್ತ ತನಿಖೆಗೆ ಆಗ್ರಹ
ಕಲಬುರಗಿ:ಮಾ.09:ವಾಡಿ ಸಮೀಪದ ಕರದಾಳ ಗ್ರಾಮದ ಕಸ್ತೂರಬಾ ವಸತಿ ನಿಲಯದಲ್ಲಿ 2 ವರ್ಷದಿಂದ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಭಾಗ್ಯಶ್ರೀ ತಂದೆ ಸಾಯಿಬಣ್ಣ ನಾಯ್ಕೋಡಿ ಯು ವಸತಿ ನಿಲಯದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ನಮ್ಮೆಲ್ಲರಲ್ಲೂ ಆಘಾತ ಮೂಡಿಸಿದೆ.
ಸಾವು ದುಖಃಕರ, ಅದರಲ್ಲಿಯೂ ಹದಿಹರೆಯದವರ ಸಾವು ಮತ್ತಷ್ಟು ದುಖಃಕರ. ಇಂತಹ ಘಟನೆಗಳು ಸಮಾಜದಲ್ಲಿ ಮಡುಗಟ್ಟಿರುವ ಜೀವನದ ಕುರಿತಾಗಿನ ಭಯ, ಅನಿಶ್ಚಿತತೆಯನ್ನು ಬೊಟ್ಟು ಮಾಡಿ ತೋರಿಸುತ್ತವೆ. ಈ ಘಟನೆ ಕುರಿತಾಗಿ ನಿಷ್ಪಕ್ಷವಾದ ತನಿಖೆ ನಡೆಸಬೇಕು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರವು ಕ್ರಮ ಕೈಗೊಳ್ಳಬೇಕೆಂದು ಎಐಡಿಎಸ್ಓ ಈ ಮೂಲಕ ಮನವಿ ಮಾಡುತ್ತದೆ.
ಇಂದು ಎಐಡಿಎಸ್ಓ ನ ನಿಯೋಗವು ಕಸ್ತೂರಿ ಬಾ ವಸತಿ ನಿಲಯ ಕರದಾಳಕ್ಕೆ ಭೇಟಿ ನೀಡಿತ್ತು. ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಸ್ನೇಹಾ ಕಟ್ಟೀಮನಿ, ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ, ಉಪಾಧ್ಯಕ್ಷರಾದ ಗೋವಿಂದ ಯಳವಾರ ಹಾಗೂ ಸಿದ್ದಾರ್ಥ್ ತಿಪ್ಪನೋರ ನಿಯೋಗದಲ್ಲಿದ್ದರು.