ಬ್ಲಿಂಕ್ ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ
ಕಲಬುರಗಿ:ಮಾ.09: ನಗರದ ಗಂಗಾನಗರದ ನಿವಾಸಿ ರವಿಚಂದ್ರ ಎಜೆ ಅವರು ನಿರ್ಮಾಪಕರಾಗಿರುವ ಬ್ಲಿಂಕ್ ಕನ್ನಡ ಚಲನಚಿತ್ರವು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ ಎಂದು ಚಲನಚಿತ್ರ ತಂಡದ ಅಂಬಣ್ಣ ಜಮಾದಾರ್ ಅವರು ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ದೇಶಕರಾಗಿ ಶ್ರೀನಿಧಿಯವರು ಕಾರ್ಯನಿರ್ವಹಿಸಿದ್ದು, ಚಲನಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ವಜ್ರಧೀರ್ ಜೈನ್, ಸುರೇಶ್ ಅನಗಳ್ಳಿ, ಚೈತ್ರ ಜೆ. ಆಚಾರ್, ಮಂದಾರ ಬತ್ತಲಹಳ್ಳಿ, ಗೋಪಾಲಕೃಷ್ಣ ದೇಶಪಾಂಡೆ, ಕಿರಣ್ ನಾಯ್ಕ್, ಯಶಸ್ವಿನಿರಾವ್ ಮುಂತಾದವರು ಅಭಿನಯಿಸಿದ್ದಾರೆ ಎಂದರು.
ರವಿಚಂದ್ರ ಅವರು ಚಲನಚಿತ್ರವನ್ನು ಜನನಿ ಪಿಕ್ಚರ್ಸ್ ಪ್ರೊಡಕ್ಷನ್ ಅಡಿ ನಿರ್ಮಾಣ ಮಾಡಿದ್ದಾರೆ. ಪ್ರಸನ್ನಕುಮಾರ್ ಅವರು ಸಂಗೀತ ನಿರ್ದೇಶಕರಾಗಿ, ಅವಿನಾಶ್ ಶಾಸ್ರ್ರಿ ಅವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಚಲನಚಿತ್ರವು ವಿಭಿನ್ನ ಕಥಾ ಹಂದರವನ್ನು ಒಳಗೊಂಡಿದೆ ಎಂದರು.
ಕಲ್ಯಾಣ ಕರ್ನಾಟಕ ನಾಡಿನ ಬಿಸಿಲ ನಾಡು, ತೊಗರಿಯ ನಾಡು ಎಂದು ಕರೆಸಿಕೊಳ್ಳುವ ಕಲಬುರ್ಗಿಯಲ್ಲಿ ಕಲೆಗೆ ಹಾಗೂ ಕಲಾಕಾರರಿಗೆ ಕೊರತೆಯಿಲ್ಲ. ಅನೇಕ ಕಲಾವಿದರು ಬೆಂಗಳೂರಿನ ಬೆಳ್ಳಿ ತೆರೆಯಲ್ಲಿ ತಮ್ಮದೇ ಆದ ಪರಿಶ್ರಮದಿಂದ ಪ್ರಸಿದ್ಧರಾಗಿದ್ದಾರೆ. ಅಂತಹ ಪ್ರತಿಭಾ ಕಲಾವಿದರಲ್ಲಿ ನಗರದ ರವಿಚಂದ್ರ ಅವರೂ ಸಹ ಸೇರಿದ್ದಾರೆ ಎಂದು ಅವರು ಹೇಳಿದರು.
ತಮ್ಮ ಸ್ವಂತ ಶ್ರಮ ಹಾಗೂ ಸತತ ಸಾಧನೆಗಳಿಂದ ಬೆಂಗಳೂರಿನ ಚಲನಚಿತ್ರೋದ್ಯಮದಲ್ಲಿ ಯುವ ಕಲಾವಿದ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದಾರೆ. ಅವರ ಮೊಟ್ಟ ಮೊದಲ ಬ್ಲಿಂಕ್ ಚಲನಚಿತ್ರವನ್ನು ಗೆಳೆಯರೊಂದಿಗೆ ಅದ್ದೂರಿಯಾಗಿ ತಯಾರಿಸಿದ್ದಾರೆ. ರವಿಚಂದ್ರ ಅವರ ತಂದೆ ಅಂಬಣ್ಣ ಜಮಾದಾರ್ ಅವರು ಆಳಂದ್ ತಾಲ್ಲೂಕಿನಲ್ಲಿ ಶಿಕ್ಷಕರಾಗಿದ್ದಾರೆ. ತಾಯಿ ಕೂಡ ಶಿಕ್ಷಕಿ. ಆಳಂದ್ ಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕಲಬುರ್ಗಿಯಲ್ಲಿ ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಕಾಲೇಜು, ಇಂಜನಿಯರಿಂಗ್ ಪೂರೈಸಿಕೊಂಡು ಬೆಂಗಳೂರಿನಲ್ಲಿ ಎಂಟೆಕ್ ಶಿಕ್ಷಣವನ್ನೂ ಸಹ ಪೂರೈಸಿದ್ದಾರೆ ಎಂದು ಅವರು ತಿಳಿಸಿದರು.
ಶಿಕ್ಷಣ ಹಂತದ ಪೂರೈಸಿದ ಮೇಲೆ ಬೆಂಗಳೂರಿನಲ್ಲಿ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿ ನಂತರ ಚಲನಚಿತ್ರೋದ್ಯಮದತ್ತ ಆಸಕ್ತಿ ಬೆಳೆಯಿತು. ಬಾಲ್ಯಾವಸ್ಥೆಯಲ್ಲಿ ನಾಟಕ, ಸಂಗೀತ ಮುಂತಾದವುಗಳಲ್ಲಿ ಆಸಕ್ತಿ ಹೊಂದಿದ ರವಿಚಂದ್ರ ಅವರು ಬೆಂಗಳೂರಿನಲ್ಲಿ ನೌಕರಿ ಬಿಟ್ಟು ಒಂದು ವರ್ಷ ನಿರಂತರ ರಂಗಭೂಮಿ ತರಬೇತಿ ಪಡೆದುಕೊಂಡರು. ಹಲವಾರು ಬಾರಿ ಚಲನಚಿತ್ರಗಳಲ್ಲಿ ನಟಿಸುವ ಅವಕಾಶವನ್ನೂ ಸಹ ಅವರು ಪಡೆದುಕೊಂಡರು. ಆಸಕ್ತಿಗೆ ತಕ್ಕಂತೆ ಚಲನಚಿತ್ರೋದ್ಯಮದಲ್ಲಿ ಗೆಳೆಯರು, ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ನಟರು ಪರಿಚಯವಾಗಿದ್ದು, ಈಗ ತಮ್ಮ ನಿರ್ಮಾಪಕತ್ವದಲ್ಲಿ ಬ್ಲಿಂಕ್ ಚಲನಚಿತ್ರವನ್ನು ನಿರ್ಮಿಸಿ ಬಿಡುಗಡೆಗೊಳಿಸಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಧರ್ಮರಾಜ್ ಜವಳಿ, ರವಿಚಂದ್ರ ಜಮಾದಾರ್, ರಾಜೇಂದ್ರ ಝಳಕಿ ಮುಂತಾದವರು ಉಪಸ್ಥಿತರಿದ್ದರು.