ಸಾಮರಸ್ಯದ ಪ್ರತೀಕವೇ ಅರ್ಧನಾರೀಶ್ವರನ ವರ್ಣನೆ: ನ್ಯಾ. ಹೇಮಲತಾ
ಕಲಬುರಗಿ:ಮಾ.09: ಶಿವ ಪ್ರೀತಿಯ ಸಂಕೇತ. ಪರಿವಾರದಲ್ಲಿ ಅನೋನ್ಯವಾಗಿ ಬೆರೆತರೆ ಮಾತ್ರ ಸಾಮರಸ್ಯ. ಅದರ ಪ್ರತೀಕವೇ ಅರ್ಧನಾರೀಶ್ವರನ ವರ್ಣನೆ ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಹೇಮಲತಾ ಅವರು ಹೇಳಿದರು.
ನಗರದ ಸೇಡಂ ರಸ್ತೆಯಲ್ಲಿರುವ ಬ್ರಹ್ಮಕುಮಾರಿಸ್ ಅಮೃತ ಸರೋವರ ರಿಟ್ರೇಟ್‍ಸೆಂಟರ್‍ನ ಬೃಹತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಶಿವರಾತ್ರಿ ಹಾಗೂ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮದ ಕಾಯರ್ಮಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಗಂಡು ಪರಸ್ಪರ ವಿಶ್ವಾಸದಿಂದ ದುಡಿದರೆ ದೇಶ ಮುಂದುವರೆಯುವುದು. ಆಡು ಮುಟ್ಟಿದ ಗಿಡವಿಲ್ಲವೆನ್ನುವ ಹಾಗೆ ಇಂದು ಹೆಣ್ಣು ಸಫಲತೆ ಪಡೆಯದ ಕ್ಷೇತ್ರವಿಲ್ಲ. ಇಂದು ಹೆಣ್ಣು ಪುರುಷರಗಿಂತಲೂ ಮುಂದಿದ್ದಾಳೆ ಎಂದರೆ ತಪ್ಪಾಗದು. ಆಧ್ಯಾತ್ಮದ ಕ್ಷೇತ್ರದಲ್ಲಿ ಹೆಣ್ಣು ಅತೀ ಎತ್ತರಕ್ಕೆ ಇದ್ದೀನಿ ಎಂದು ತಿಳಿಸಿದರು.
ಇನ್ನೋರ್ವ ಅತಿಥಿ ನಾಗನಹಳ್ಳಿಯ ಪೋಲಿಸ್ ತರಬೇತಿ ಕೇಂದ್ರದ ಪ್ರಿನ್ಸಿಪಾಲ್ ಕಿಶೋರಬಾಬು ಅವರು ಮಾತನಾಡಿ, ಭಾರತದಲ್ಲಿ ಇರುವಂತಹ ಕುಟುಂಬ ವ್ಯವಸ್ಥೆ ಅತ್ಯುತ್ಮಮವಾಗಿದೆ. ಶಿವ ಶಕ್ತಿ ಅರ್ಥಾತ್ ಪತಿ, ಪತ್ನಿ ಒಟ್ಟಿಗೆ ಇದ್ದು, ಜೀವನದ ವಜ್ರ ಮಹೋತ್ಸವ ಆಚರಿಸುವ ಉದಾಹರಣೆಗಳಿವೆ. ಇಂತಹದು ವಿಶ್ವದ ಬೇರೆಡೆ ಕಾಣೆವು. ಪರಿವಾರ, ಸಮಾಜ ಸದೃಢವಾಗಿರಲು ಸ್ತ್ರೀಯರ ಪಾತ್ರ ಅತೀ ಮುಖ್ಯವಾಗಿದೆ ಎಂದರು.
ಈ ಮೊದಲು ಬ್ರಹ್ಮಕುಮಾರಿ ಸಂಸ್ಥೆಗೆ ಬಂದಿದ್ದೆ. ಅವರ ಕಾರ್ಯವೈಖರಿ ಒಟ್ಟಾಗಿ ಕಾರ್ಯ ಮಾಡುವ ವಿಧಾನ ನಿಜವಾಗಿಯೂ ಶ್ಲಾಘನೀಯ. ಧಾರ್ಮಿಕ ಕ್ಷೇತ್ರದಲ್ಲಿ ಅಥವಾ ರಾಜಕೀಯ ಕ್ಷೇತ್ರದಲ್ಲಿ ಛಿದ್ರ, ವಿಛಿದ್ರಗೊಂಡ ಸಾಮಾಜಿಕ ವ್ಯವಸ್ಥೆಗೆ ಅಧ್ಯಾತ್ಮ ಒಂದು ದಿವ್ಯ ಔಷಧಿಯಾಗಿದೆ ಎಂದು ಅವರು ಬಣ್ಣಿಸಿದರು. ಬ್ರಹ್ಮಕುಮಾರಿ ಸಂಸ್ಥೆಯ ವಲಯ ಮುಖ್ಯಸ್ಥೆ ರಾಜಯೋಗಿನಿ ಬಿಕೆ ವಿಜಯಾದೀದಿ, ಸಂಸ್ಥೆಯ ಸಮಾಜ ಸೇವಾ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷ ರಾಜಯೋಗಿ ಪ್ರೇಮ್ ಅವರು ಮಾತನಾಡಿದರು.
ಬಿಕೆ ಸವಿತಾ ಅವರು ಸ್ವಾಗತಿಸಿದರು. ಬಿಕೆ ದಾನೇಶ್ವರಿ ಅವರು ಸಂಸ್ಥೆಯ ಪರಿಚಯ ಮಾಡಿದರು. ಬಿಕೆ ಶಿವಲೀಲಾ ಅವರು ಕಾರ್ಯಕ್ರಮ ನಿರೂಪಿಸಿದರು. ಮಹಾಶಿವರಾತ್ರಿ ನಿಮಿತ್ಯ ಬಹು ಸುಂದರವಾಗಿ ಸಾವಿರಾರು ಕುಂದನ ಹರಳುಗಳಿಂದ ಅಲಂಕರಿಸಲಾದ ಬೃಹತ್ ಶಿವಲಿಂಗ ಹಾಗೂ ದ್ವಾದರ್ಶ ಜ್ಯೋತಿರ್ಲಿಂಗಗಳ ದರ್ಶನ ಭಾಗ್ಯವನ್ನು ಸುಮಾರು 40,000 ಜನರು ಪಡೆದರು.