ಜೀವನದಲ್ಲಿ ಶ್ರದ್ಧೆ, ಶ್ರಮ ಇದ್ದಾಗ ಸಾಧನೆ ಸಾಧ್ಯ: ರುದ್ನೂರ್
ಚಿತ್ತಾಪುರ:ಮಾ.9: ವಿದ್ಯಾರ್ಥಿಗಳ ಜೀವನದಲ್ಲಿ ಶ್ರದ್ಧೆ ಬದ್ಧತೆ, ಪ್ರಾಮಾಣಿಕತೆ ಮತ್ತು ಶ್ರಮ ಇದ್ದರೆ ಮಾತ್ರ ಸಾಧನೆ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ್ ಹೇಳಿದರು.
ಪಟ್ಟಣದ ನಾಗಾವಿ ಕ್ಯಾಂಪಸ್‍ನ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮನೆಗಳಲ್ಲಿ ಟಿವಿಯಿಂದ ದೂರ ಇದ್ದು ಓದುವುದನ್ನು ಕಲಿಯಬೇಕು, ಒಳ್ಳೆಯ ಅಭ್ಯಾಸ ಮಾಡಿ ಕಷ್ಟಪಟ್ಟರೆ ಮಾತ್ರ ಗುರಿಯನ್ನು ಮುಟ್ಟಲು ಸಾಧ್ಯ, ಕಷ್ಟದಲ್ಲಿದ್ದ ಹಾಗೂ ಬಡತನದಲ್ಲಿದ್ದವರೇ ಅನೇಕರು ಸಾಧನೆ ಮಾಡಿದ್ದಾರೆ ಇದಕ್ಕೆ ಸಾಕಾಷ್ಟು ಉದಾಹರಣೆಗಳು ಕಣ್ಮುಂದೆ ಇವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ರಾವೂರ ಸಿದ್ದಲಿಂಗೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಮೊದಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು, ಸೋತಾಗ ಹಿಂಜರಿಯಬಾರದು, ಪುನ: ಕಠಿಣ ಪರಿಶ್ರಮ ಪಡಬೇಕು ಅಲ್ಲಿಯೂ ಸೋತಾಗ ಕಠಿಣ ತಪಸ್ಸು ಮಾಡಬೇಕು, ಗುರಿ ಮುಟ್ಟಲು ಮಾಡುವ ನಿರಂತರ ಅಧ್ಯಯನವೇ ತಪಸ್ಸು. ಅಂದರೆ ವೃಥಾ ಸಮಯ ವ್ಯರ್ಥ ಮಾಡದೆ, ಹರಟೆ ಹೊಡೆಯದೆ ಟಿವಿ ನೋಡದೇ, ಮೊಬೈಲ್‍ನೊಂದಿಗೆ ಸಮಯ ಕಳೆಯದೆ ಎಲ್ಲವನ್ನು ತ್ಯಾಗ ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಪ್ರಭಾರಿ ಮುಖ್ಯಗುರು ಜನತುಲ್ ಫಿರೋದಸ್ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ಕಾಯಕ ಫೌಂಡೇಷನ್ ಪಿಯು ಕಾಲೇಜಿನ ಪ್ರಾಚಾರ್ಯ ನಾಗರಾಜ ಕಾಮಾ, ಪುರಸಭೆ ಸದಸ್ಯ ಜಗದೀಶ ಚವ್ಹಾಣ, ಎಸ್‍ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಜೆಸ್ಕಾಂ ಮಾಜಿ ನಿರ್ದೇಶಕ ಮುಕ್ತಾರ ಪಟೇಲ್ ಮಾತನಾಡಿದರು. ಪುರಸಭೆ ಸದಸ್ಯ ವಿನೋದ ಗುತ್ತೇದಾರ, ಭಾರತೀಯ ಬೌದ್ಧ ಮಹಾಸಭಾ ತಾಲೂಕು ಅಧ್ಯಕ್ಷ ಜಗನ್ನಾಥ ಮುಡಬೂಳಕರ್, ಸುನೀತಾ ತಳವಾರ, ಸುಭಾಶ್ಚಂದ್ರ ಅವಂಟಿ, ಹುಸನಯ್ಯ ಗುತ್ತೇದಾರ, ದೇವಸುಂದರ ಕರದಾಳ, ಆನಂದ ಮೆಲಗಡೆ, ಸಂತೋಷಕುಮಾರ ಜಮಾದಾರ, ಶಿವರಾಜ ಹೆಬ್ಬಾಳ, ಹಣಮಂತ, ರೇಣುಕಾ ರೋಣದ್, ಮಂಜುನಾಥ, ಪಲ್ಲವಿ, ತಯ್ಯಾಬಾ, ಮಾಲಾಶ್ರೀ, ಶಾರದಾ, ಪ್ರಶಾಂತ ಇತರರು ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು ನಂತರ ಮಕ್ಕಳಿಂದ ಸಾಂಸ್ಕøತಿ ಕಾರ್ಯಕ್ರಮಗಳು ನಡೆದವು. ಶಿವಬಸಪ್ಪ ಗುತ್ತೆಪ್ಪನವರ್ ಸ್ವಾಗತಿಸಿದರು, ಶಿವಪುತ್ರ ವಿ.ಬಿ ನಿರೂಪಿಸಿದರು.