2.97 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು
ಕಲಬುರಗಿ,ಮಾ.9-ಮನೆಯ ಹಿಂಬಾಗಿಲು ಮುರಿದು 2,97,326 ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ.
ಲೈನ್‍ಮನ್ ರಾಜಕುಮಾರ ಪ್ಯಾಟಿ ಎಂಬುವವರ ಮನೆಯ ಹಿಂಬಾಗಿಲು ಮುರಿದು ಅಲಮಾರಿಯಲ್ಲಿದ್ದ 2,20,326 ರೂ.ಮೌಲ್ಯದ 41 ಗ್ರಾಂ.ಬಂಗಾರದ ಮಂಗಳಸೂತ್ರ, 36 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಸುತ್ತುಂಗರ, 36 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಲಾಕೇಟ್ ಮತ್ತು 5 ಸಾವಿರ ರೂ.ನಗದು ಹಣವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದು, ರಾಜಕುಮಾರ ಅವರು ಗೆಳೆಯನ ಮದುವೆ ಸಮಾರಂಭಕ್ಕೆಂದು ಮನೆಗೆ ಬೀಗ ಹಾಕಿಕೊಂಡು ಧಾರವಾಡಕ್ಕೆ ಹೋದ ವೇಳೆ ಕಳ್ಳರು ಮನೆಯ ಹಿಂಬಾಗಿಲು ಮುರಿದು ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.