ಮಗುವಿನ ವೃತ್ತದ ಬಳಿ ಮಹಿಳಾ ದಿನಾಚರಣೆ
ಬೀದರ:ಮಾ.9:ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಬೀದರ ವತಿಯಿಂದ ಪ್ರತಿ ವರ್ಷ ನಗರದ ತಾಯಿ ಮಗುವಿನ ವೃತ್ತದ ಬಳಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಜಿಲ್ಲಾ ಲೇಖಕಿಯರ ಸಂಘ , ಬಸವಕೇಂದ್ರ ಮಹಿಳಾ ಘಟಕ ಮತ್ತು ಕಸಾಪ ಮಹಿಳಾ ಘಟಕದವರೆಲ್ಲರೂ ಸೇರಿ ಸಂಭ್ರಮದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಿದರು .
ವೃತ್ತದ ಬಳಿ ಸೇರಿದ ಎಲ್ಲ ಮಹಿಳೆಯರು ತಾಯಿ ಮಗುವಿನ ಮೂರ್ತಿಗೆ ಹಾರವನ್ನು ಹಾಕಿ , ಹೆಣ್ಣು ಮಗುವನ್ನು ರಕ್ಷಿಸಿ , ಹೆಣ್ಣು ಮಗುವನ್ನು ಓದಿಸಿ , ಹೆಣ್ಣು ಜಗದ ಕಣ್ಣು , ಹೆಣ್ಣು ಸಾಕ್ಷಾತ್ ಕಪಿಲ ಸಿದ್ಧ ಮಲ್ಲಿಕಾರ್ಜುನ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಅಲ್ಲದೆ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿಜೆ ಪಾರ್ವತಿ ವಿ ಸೋನಾರೆಯವರು ಮಾತನಾಡಿ ,
ಹೆಣ್ಣು ಇವತ್ತಿನ ಸ್ಥಿತ್ಯಂತರ ಕಾಲಘಟ್ಟದಲ್ಲಿ ತುಂಬಾ ತೊಂದರೆಯಲ್ಲಿದ್ದಾಳೆ. ಹೆಣ್ಣನ್ನು ರಕ್ಷಸಿ ಎಂದು ಘೋಷಣೆ ಕೂಗುವ ಪರಿಸ್ಥಿತಿ ಎದುರಾಗಿದೆ ಎಂದರೆ , ಹೆಣ್ಣು ತೊಂದರೆಯಲ್ಲಿದ್ದಾಳೆ ಎಂದೇ ಅರ್ಥ . ಈಗ ನಾವು ಎಚ್ಚೆತ್ತು ಕೊಳ್ಳದಿದ್ದರೆ ಹೆಣ್ಣಿಗಾಗಿ ಯುದ್ಧವಾಗುವ ಕಾಲ ಬರುವುದು ದೂರವಿಲ್ಲ . ಅವರನ್ನು ರಕ್ಷಿಸುವುದಷ್ಟೇ ಅಲ್ಲ ಗೌರವಿಸುವುದನ್ನು ಕೂಡ ನಾವು ನಮ್ಮ ಗಂಡಸು ಮಕ್ಕಳಿಗೆ ಕಲಿಸಬೇಕಾಗಿದೆ . ಈ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು . ಅದೇ ರೀತಿಯಾಗಿ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಭಾರತಿ ವಸ್ತ್ರದ ಅವರು ಮಾತನಾಡಿ 1974 ರಿಂದ 2024 ರವರೆಗೆ ನಾವು ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ . ಈ ನಡುವೆ ಅನೇಕ ಬದಲಾವಣೆಗಳು ಆಗಿವೆ . ನಮ್ಮ ಮಹಿಳೆಯರು ಈಗೀಗ ಆತ್ಮಹತ್ಯೆಗೆ ಕೊರಳೊಡ್ಡುತ್ತಿಲ್ಲ . ಧೈರ್ಯದಿಂದ ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಪುರುಷನಿಗೆ ಸಮಾನವಾದ ಸ್ಥಾನ ಮಾನಗಳು ಆಕೆಗೆ ಸಿಗುತ್ತಿಲ್ಲ . ಆ ನಿಟ್ಟಿನಲ್ಲಿ ತಂದೆ , ಅಣ್ಣ , ಗಂಡ, ಮತ್ತು ಮಾವ ಭಾವ ಮೈದುನರು ಸಹಕಾರ ನೀಡುವ ಅವಶ್ಯಕತೆ ಇದೆ ಎಂದರು.
ಬಸವ ಕೇಂದ್ರದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಬಲ್ಲೂರ ಅವರು ಮಾತನಾಡಿ ಎಲ್ಲೆಲ್ಲಿ ಮಹಿಳೆಯರು ನೆಲೆಸಿದ್ದಾರೆ ಅಲ್ಲೆಲ್ಲಾ ದೇವತೆಗಳು ನೆಲಸಿದ್ದಾರೆ ಎಂಬ ಮಾತನ್ನು ನಾವೆಲ್ಲ ಕೇಳುತ್ತಲೇ ಬಂದಿದ್ದೇವೆ. ಆದರೆ ಇಷ್ಟು ಶತಮಾನಗಳು ಕಳೆದರೂ ಹೆಣ್ಣಿನ ಮೇಲೆ ಅನ್ಯಾಯ ಅತ್ಯಾಚಾರಗಳು ನಡೆಯುತ್ತಲೇ ಇವೆ . ವಿದ್ಯಾವಂತರೇ ಹೆಚ್ಚಿರುವ ಇವತ್ತಿನ ಸಮಾಜದಲ್ಲಿ ಹೆಣ್ಣನ್ನು ನಿಕೃಷ್ಟವಾಗಿ ಕಾಣುವ ಮನಸುಗಳು ಹೆಚ್ಚುತ್ತಲೇ ಇವೆ . ಎಂದರು .
ಅದೇ ರೀತಿಯಾಗಿ ರೂಪಾ ಪಾಟಿಲ್ , ಜಯದೇವಿ ಯದ್ಲಾಪೂರೆ ಶ್ರೇಯಾ ಮಹೇಂದ್ರಕರ್ , ಮಹಾನಂದಾ ಎಸ್ ಪಾಟೀಲ ,ಶ್ರೀದೇವಿ ಹೂಗಾರ ಮಹಿಳಾ ಶೋಷಣೆಯ ಬಗ್ಗೆ ಮಾತನಾಡಿದರು. ಕೀರ್ತಿಲತಾ ಹೊಸಳ್ಳಿ , ಸ್ವರೂಪರಾಣಿ ನಾಗೂರೆ , ಕೀರ್ತಿಲತಾ ಹೊಸಳ್ಳಿ , ಮಂಗಲಾ ಭಾಗವತ್ , ರೇಣುಕಾ ಮಠ್ , ಶಿಲ್ಪಾ ಮಜಗೆ , ಲಕ್ಮಿ ಗಾದಗಿ , ಲಾಡಗೇರಿಯ ಮಹಿಳೆಯರು ಮಹಿಳಾ ಸಫಾಯಿ ಕರ್ಮಚಾರಿಗಳು ಮುಂತಾದವರಿದ್ದರು.