71 ವಿದ್ಯಾರ್ಥಿಗಳಿಗೆ ಕನ್ನಡಕ ಉಚಿತ ವಿತರಣೆ
ಬೀದರ್: ಮಾ.9:ಇಲ್ಲಿಯ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 71 ವಿದ್ಯಾರ್ಥಿಗಳಿಗೆ ಕನ್ನಡ ಉಚಿತ ವಿತರಿಸಲಾಯಿತು.
ಶಾಲೆಯಲ್ಲಿ ವಾರದ ಹಿಂದೆ ವಿದ್ಯಾರ್ಥಿಗಳ ಉಚಿತ ನೇತ್ರ ತಪಾಸಣೆ ನಡೆಸಲಾಗಿತ್ತು. ಈ ಪೈಕಿ ದೃಷ್ಟಿ ದೋಷ ಕಾಣಿಸಿಕೊಂಡ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ 56 ಹಾಗೂ ಶ್ರೀ ಶಿವಕುಮಾರೇಶ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ 15 ವಿದ್ಯಾರ್ಥಿಗಳಿಗೆ ಕನ್ನಡ ವಿತರಿಸಲಾಗಿದೆ ಎಂದು ಕನ್ನಡಕ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಡಾ. ಕಿರಣ ಪಾಟೀಲ ಹೇಳಿದರು.
ಮಾನವನ ಅಂಗಗಳಲ್ಲಿ ಕಣ್ಣು ಬಹಳ ಪ್ರಮುಖವಾದದ್ದು. ಕಣ್ಣಿನ ಆರೋಗ್ಯ ಕಾಯ್ದುಕೊಳ್ಳುವುದು ಅವಶ್ಯಕ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಉಂಟಾದರೂ ತಕ್ಷಣ ನೇತ್ರ ತಜ್ಞರನ್ನು ಕಾಣಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಹೇಳಿದರು.
ನೇತ್ರಾಧಿಕಾರಿ ಡಾ. ಶಿವಕುಮಾರ ಗುಮ್ಮಾ, ಡಾ. ಅರ್ಚನಾ, ಡಾ. ಶೈಲಜಾ, ಶ್ರೀ ಶಿವಕುಮಾರೇಶ ಗುರುಕುಲ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಮ್ಯಾಗೆರಿ, ಅನಿಲಕುಮಾರ, ಸತೀಶ ಪಾಟೀಲ ಇದ್ದರು.