ಭಕ್ತಿ ಭಾವದಿಂದ ಮಹಾ ಶಿವರಾತ್ರಿ ಆಚರಣೆ
ತಾಳಿಕೋಟೆ:ಮಾ.9: ಮಹಾ ಶಿವರಾತ್ರಿಯ ನಿಮಿತ್ಯವಾಗಿ ಶುಕ್ರವಾರರಂದು ಪಟ್ಟಣದ ಜನರು ಭಕ್ತಿ ಭಾವದೊಂದಿಗೆ ಉಪವಾಸ ವೃತವನ್ನು ಆಚರಿಸಿ ದೇವಸ್ಥಾನಗಳಿಗೆ ತೆರಳಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಬೆಳಿಗ್ಗೆಯಿಂದಲೇ ಪಟ್ಟಣದ ದೇವಸ್ಥಾನಗಳಿಗೆ ಭಕ್ತಾಧಿಗಳು ಆಗಮಿಸುತ್ತಿದ್ದಲ್ಲದೇ ಕಾಯಿ, ಕರ್ಪೂರ, ಎಡೆ, ಲೋಭಾನ, ನೈವೇಧ್ಯೆಗಳನ್ನು ನೀಡುತ್ತಿರುವದು ಕಂಡು ಬಂದಿತು. ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠ, ಪುರಾತನ ದೇವಸ್ಥಾನವಾದ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನ, ರಾಜವಾಡೆಯ ಶ್ರೀ ಮಹಾದೇವರ ದೇವಸ್ಥಾನ, ಶ್ರೀ ಹನುಮಾನ ಮಂದಿರ, ಶ್ರೀ ಅಂಬಾಭವಾನಿ ಮಂದಿರ, ಶ್ರೀ ಶಿವಭವಾನಿ ಮಂದಿರ ಒಳಗೊಂಡಂತೆ ಅನೇಕ ದೇವಸ್ಥಾನಗಳಿಗೆ ಭಕ್ತರ ದಂಡು ಹರಿದುಬರುತ್ತಿರುವದು ಸಾಮಾನ್ಯವಾಗಿತ್ತು.
ಶ್ರೀ ಖಾಸ್ಗತೇಶ್ವರ ಮಠದಲ್ಲಿ ಮಠಕ್ಕೆ ಬರುವ ಭಕ್ತಾಧಿಗಳಿಗೆ ಬಾಳೆ ಹಣ್ಣು, ದ್ರಾಕ್ಷೀ, ಕಝೂರಿಯನ್ನು ನೀಡುವದರೊಂದಿಗೆ ಉಪವಾಸ ವೃತಬಿಡುವದಕ್ಕೆ ವ್ಯವಸ್ಥೆ ಮಾಡಲಾಗಿತ್ತು ಅದರಂತೆ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿಯೂ ಕೂಡಾ ಕಝೂರಿ, ಗೆಣಸು, ಇನ್ನಿತರ ಪ್ರಸಾದ ವಿತರಣೆ ಕಾರ್ಯ ನಡೆಯುತು. ಸಾಯಂಕಾಲ 7 ಗಂಟೆಗೆ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠ ಮತ್ತು ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಘೋಷವಾದ್ಯಗಳು ಮೊಳಗಿದವಲ್ಲದೇ ಅಖಂಡ ರಾತ್ರಿ ಶಿವಭಜನೆ ಜರುಗಿತು.
ಮಹಾ ಶಿವರಾತ್ರಿಯ ನಿಮಿತ್ಯ ಶ್ರೀ ಖಾಸ್ಗತರ ಹಾಗೂ ಶ್ರೀ ವಿರಕ್ತಶ್ರೀಗಳ ಕತೃಗದ್ದುಗೆಗೆ ವೇ.ವಿಶ್ವನಾಥ ವಿರಕ್ತಮಠ ಅವರು ಮಹಾಪೂಜೆ ಸಲ್ಲಿಸಿದರು.