ಮನ, ಚಿತ್ತಶುದ್ಧಿಗಾಗಿ ಲಿಂಗಪೂಜೆ : ಮಾತೆ ಸತ್ಯಾದೇವಿ
ಬೀದರ್:ಮಾ.9: ಮನಸ್ಸು, ಚಿತ್ತ ಮತ್ತು ಆತ್ಮಶುದ್ಧಿಗಾಗಿ ಇಷ್ಟಲಿಂಗ ಪೂಜೆಯನ್ನು ಪ್ರತಿಯೊಬ್ಬರೂ ಮಾಡಿಕೊಳ್ಳಬೇಕೆಂದು ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ನುಡಿದರು.
ಜಿಲ್ಲಾ ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ವತಿಯಿಂದ ನಗರದ ಬಸವ ಮಂಟಪದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡ ಸಾಮೂಹಿಕ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಿ ಮಾತನಾಡಿದರು.
ಜಂಗಮನೆಂಬ ವೈದ್ಯರಿಂದ, ಭಕ್ತರಿಗೆ ದೀಕ್ಷೆಯೆಂಬ ಶಸ್ತ್ರಚಿಕಿತ್ಸೆ ಮೂಲಕ ಪಂಚೆಂದ್ರಿಯಗಳೆಂಬ ಅಂಗಶುದ್ಧಿ ಮಾಡುವ ಅವಶ್ಯಕತೆ ಇದೆ. ಅಂಗಶುದ್ಧಿಯಾದಾಗ ವ್ಯಕ್ತಿ ಸಂಸ್ಕಾರಯುತವಾಗಿ ಬದುಕುತ್ತಾನೆ. ಕೇವಲ ಒಂದು ದಿನ ಪೂಜೆ ಮಾಡದೆ, ಪ್ರತಿನಿತ್ಯ ಶಿವರಾತ್ರಿ ಎಂದು ಭಾವಿಸಿ ಪೂಜಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ರಾಷ್ಟ್ರೀಯ ಬಸವ ದಳದ ನಗರಾಧ್ಯಕ್ಷ ಡಾ. ಮಹೇಶ ಬಿರಾದಾರ ಮಾತನಾಡಿ ಸುಮಾರು 40 ವರ್ಷಗಳಿಂದ ಬಸವ ಮಂಟಪದಲ್ಲಿ ಲಿಂಗಪೂಜೆ ಮಾಡುತ್ತ ಬರಲಾಗುತ್ತಿದೆ. ಸಾವಿರಾರು ಜನರು ಲಿಂಗಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವುದು ಇಲ್ಲಿಯ ವಿಶೇಷತೆಯಾಗಿದೆ. ಶ್ವೇತಧಾರಿಗಳಾಗಿ, ಸ್ಕಾರ್ಫ್ ಧರಿಸಿ, ಶಿಸ್ತಿನಿಂದ ಲಿಂಗಪೂಜೆಯಲ್ಲಿ ಪಾಲ್ಗೊಳ್ಳುವ ಶರಣರಿಗೆ ಪೂಜ್ಯ ಸತ್ಯಾದೇವಿ ಮಾತಾಜಿ ಮಾರ್ಗದರ್ಶನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿ ಇಂದಿನ ಕಾಲದಲ್ಲಿ ಯುವಕರು ಕೂಡ ಲಿಂಗಪೂಜೆಯಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಇದೆ. ಧರ್ಮದ ಕಡೆಗೆ ಜನರು ಬರದೇ ಇದ್ದಾಗ, ಧರ್ಮವನ್ನೇ ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಕಾರ್ಯ ಮಾತೆ ಮಹಾದೇವಿ ಮಾಡಿದ್ದಾರೆ. ಅದನ್ನು ಈಗ ಸತ್ಯಾದೇವಿ ಮಾತೆಯವರು ಮುನ್ನಡೆಸಿಕೊಂಡು ಹೋಗುತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಸಾವಿರಾರು ಶರಣ ಶರಣೆಯರು ಪಾಲ್ಗೊಂಡಿದ್ದರು. ದಾಸೋಹವನ್ನು ಪೆÇ್ರ. ವೀರಶೆಟ್ಟಿ ಮೈಲೂರಕರ್ ಏರ್ಪಡಿಸಿದ್ದರು. ಇದೇ ವೇಳೆ ಪೂಜೆಯಲ್ಲಿ ಹಾವಶೆಟ್ಟಿ ಪಾಟೀಲ, ನಾಗಶೆಟ್ಟಿ ದಾಡಗಿ, ಬಸವರಾಜ ಸಂಗಮದ್, ಶಿವಶರಣಪ್ಪ ಪಾಟೀಲ, ಶಿವರಾಜ ಪಾಟೀಲ, ಬಸವಂತರಾವ ಬಿರಾದಾರ, ಅಕ್ಕಮಹಾದೇವಿ ಸ್ವಾಮಿ, ನಿರ್ಮಲಾ ನಿಲಂಗೆ, ಸುರೇಶ ಪಾಟೀಲ, ಪ್ರಭು ಪಾಟೀಲ, ಕಲ್ಯಾಣರಾವ ಬಂಬುಳಗಿ, ಬಸವಕುಮಾರ ಚಟನಳ್ಳಿ, ಗಣಪತಿ ಬಿರಾದಾರ, ಸತೀಶ ಪಾಟೀಲ, ಮಹಾರುದ್ರ ಡಾಕುಳಗೆ ಸೇರಿದಂತೆ ಹಲವರಿದ್ದರು.