ಮಾಶಾಳದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ಸಲ್ಲಿಕೆ
ಅಫಜಲಪುರ: ಮಾ.9:2023 ರ ಮಾರ್ಚ್ 25 ರಂದು ತಾಲೂಕಿನ ಮಾಶಾಳ ಗಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ಸಲ್ಲಿಕೆಯನ್ನು ಪರಿಷತ್ತಿನ ಕೋಶಾಧ್ಯಕ್ಷ (ಖಜಾಂಚಿ) ಅರುಣಕುಮಾರ ಹೂಗಾರ ಸಲ್ಲಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಕ.ಸಾ.ಪ ತಾಲೂಕು ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಸಮ್ಮೇಳನದ ಲೆಕ್ಕ ಪತ್ರ ವಿವರಣೆ ನೀಡಿ ಮಾತನಾಡಿದ ಅವರು ಸಮ್ಮೇಳನಕ್ಕೆ ಸಂಗ್ರಹವಾದ ಸುಮಾರು 1 ಲಕ್ಷ 41 ಸಾವಿರ 800 ರೂ. ಯಲ್ಲಿ ಎಲ್ಲ ಖರ್ಚು ವೆಚ್ಚಗಳನ್ನು ತೆಗೆದು 900 ರೂ. ಉಳಿದಿರುವುದಾಗಿ ತಿಳಿಸಿದರು. ಹಾಗೂ ಸಮ್ಮೇಳನಕ್ಕೆ ನೆರವು ಮತ್ತು ಸಹಕಾರ ನೀಡಿದ ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ವೈ ಪಾಟೀಲ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ರಾಮಣ್ಣ ನಾಯ್ಕೋಡಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ, ಉದ್ದಿಮೆದಾರ ವೈಜನಾಥ ನಿಂಗದಳ್ಳಿ, ಪಿ.ಕೆ.ಪಿ.ಎಸ್ ಮಾಜಿ ಅಧ್ಯಕ್ಷ ಶಿವು ಪ್ಯಾಟಿ, ಮಾಶಾಳ ವಲಯದ ಕ.ಸಾ.ಪ ಅಧ್ಯಕ್ಷೆ ಶಿಲ್ಪಾ ಆಲೇಗಾಂವ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸೇರಿದಂತೆ ಶಾಸಕರು, ತಾಲೂಕು ಆಡಳಿತ, ಪರಿಷತ್ತಿನ ಸದಸ್ಯರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಕನ್ನಡ ಅಭಿಮಾನಿಗಳು ಹಾಗೂ ಮಾಶಾಳ ಗ್ರಾಮಸ್ಥರ ಸಹಕಾರವನ್ನು ಸ್ಮರಿಸಿದರು.
ಕ.ಸಾ.ಪ ತಾಲೂಕು ಅಧ್ಯಕ್ಷ ಪ್ರಭು ಫುಲಾರಿ ಅವರು ಮಾತನಾಡಿ, ಮುಂಬರುವ ಲೋಕಸಭಾ
ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಆಗುವುದರಿಂದ ಚುನಾವಣೆ ಮುಗಿದ ನಂತರ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕವನ್ನು ಎಲ್ಲರ ಸಲಹೆ, ಸೂಚನೆ ಮತ್ತು ಸಹಕಾರದೊಂದಿಗೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಮಹಿಳಾ ಪ್ರತಿನಿಧಿ ಪ್ರೇಮಾವತಿ ರಾಜಾನವರ ಅವರು ಮಾತನಾಡಿ ಅಫಜಲಪುರ ಪುರಸಭೆ ವತಿಯಿಂದ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆ ಅಡಿಯಲ್ಲಿ ಕನ್ನಡ ಭವನ ನವೀಕರಣಕ್ಕಾಗಿ 1.50 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದ್ದು ಕಿಟಕಿ ದುರಸ್ತಿ ಹಾಗೂ ಕನ್ನಡ ಭವನಕ್ಕೆ ಬಣ್ಣ ಹಚ್ಚುವ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವುದಾಗಿ ತಿಳಿಸಿದರು.
ಸಭೆಯಲ್ಲಿ ಮುಂಬರುವ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅರ್ಥಪೂರ್ಣ ಆಚರಣೆ, ಕನ್ನಡ ಭವನದ ಉನ್ನತೀಕರಣ ಸೇರಿದಂತೆ ಮುಂತಾದ ಚಟುವಟಿಕೆಗಳ ಕುರಿತು ಎಲ್ಲ ಸದಸ್ಯರು ಚರ್ಚಿಸಿದರು.
ಸಭೆಯಲ್ಲಿ ಪರಿಷತ್ತಿನ ಸದಸ್ಯರಾದ ಬಸಣ್ಣ ಗುಣಾರಿ, ಡಾ. ಸಂಗಣ್ಣ ಸಿಂಗೆ, ಪರಮಾನಂದ ಸರಸಂಬಿ, ಶಿಲ್ಪಾ ಆಲೇಗಾಂವ, ಬಾಹುಬಲಿ ಮಾಲಗತ್ತಿ, ಬಿ.ಎಂ ರಾವ್, ವಿಶ್ವನಾಥ ಹೇರೂರ, ಚಿನ್ನು ಮನಿಯಾರ, ಸಂತೋಷ ಪೆÇೀದ್ದಾರ ಉಪಸ್ಥಿತರಿದ್ದರು.