ತಂದೆಯ ಆಶಯದಂತೆ ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿ – ಎನ್ ಟಿ ತಮ್ಮಣ್ಣ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.9 :-  ತಂದೆಯವರಾದ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಅವರು ಕಂಡ ಶೈಕ್ಷಣಿಕ ಪ್ರಗತಿಯ ಕನಸನ್ನು ನನಸು ಮಾಡುವಲ್ಲಿ ಸಹೋದರ ಶಾಸಕ ಡಾ ಶ್ರೀನಿವಾಸ ಜೊತೆ ಸೇರಿ ತಂದೆಯ ಆಶಯದಂತೆ ಡಿಗ್ರಿ ಮುಗಿದ ಮೇಲೆ ಮುಂದೇನು ಎಂದು ಯೋಚಿಸುವ ಬಡ ಮಕ್ಕಳ ಉನ್ನತ ಶಿಕ್ಷಣದ ಪ್ರಗತಿಗೆ ಪಟ್ಟಣದಲ್ಲಿ ಉಚಿತ ಕೋಚಿಂಗ್ ಸೆಂಟರ್ ಮಾಡಿ ಸ್ಪರ್ಧಾತ್ಮಕ ಪರೀಕ್ಷೆ ಸುಲಭವಾಗಿಸಲು ಮುಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡ್ಲಿಗಿ ಕ್ಷೇತ್ರ ಉತ್ತುಂಗಕ್ಕೆರಿಸುವ ಬಯಕೆ ನಮ್ಮದಾಗಿದೆ ಎಂದು ಕೂಡ್ಲಿಗಿ ಶಾಸಕರ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ಎನ್ ಟಿ ತಮ್ಮಣ್ಣ ತಿಳಿಸಿದರು.
ಅವರು ಪಟ್ಟಣದ ಕೆಕೆಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸ್ವಂತ  ಕಟ್ಟಡದಲ್ಲಿ ಮಾಜಿ ಶಾಸಕ ದಿ.ಎನ್.ಟಿ.ಬೊಮ್ಮಣ್ಣ ಸ್ಮರಣಾರ್ಥ ಆರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕೋಚಿಂಗ್ ಸೆಂಟರ್‌  ಚಾಲನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ  ಮಾತನಾಡುತ್ತಾ ತಂದೆ ಎನ್ ಟಿ ಬೊಮ್ಮಣ್ಣ ಅವರು ಓದಿದ್ದು ನಾಲ್ಕನೇ ತರಗತಿಯಾದರು ಅವರು ದುಡುಮೆಯ ಬೆನ್ನತ್ತಿ ಬಾರ್ ಅಂಡ್ ರೆಸ್ಟೋರೆಂಟ್ ಮಾಡದೆ ಕೂಡ್ಲಿಗಿ ಕ್ಷೇತ್ರದ ಮೂಲೆಕಟ್ಟಿನ ಭಾಗದಲ್ಲಿ ಹೈಸ್ಕೂಲ್ ನ್ನು ಕಟ್ಟಿಸಿ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದ್ದಾರೆ ಅಲ್ಲದೆ ಕೂಡ್ಲಿಗಿ ಕ್ಷೇತ್ರದ ಶಾಸಕರಾಗಿದ್ದಾಗ ಪಿಯು ನಂತರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಿರ್ಮಾಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂದು ಕಟ್ಟಿದ ಸರ್ಕಾರಿ ಆಸ್ಪತ್ರೆ ಇಂದು ನೂರು ಹಾಸಿಗೆ ಆಸ್ಪತ್ರೆಯಾಗಿದೆ ಎಂದು ತಿಳಿಸಿದರು. ತಂದೆಯವರು ಹಾಕಿಕೊಟ್ಟ ಶೈಕ್ಷಣಿಕ ಪ್ರಗತಿಯ ಹಾದಿಯಲ್ಲಿ ಪ್ರಥಮ ದರ್ಜೆ ಕಾಲೇಜ್ ಶಿಕ್ಷಣ ಮುಗಿದ ಮೇಲೆ ಮುಂದೇನು ಎನ್ನುವ ಪ್ರಶ್ನೆಗೆ ಅವರ ಸ್ಮರಣಾರ್ಥ ಅವರ ಆಶಯದಂತೆ ಡಿಗ್ರಿ ಮುಗಿಸಿದ ಯುವಕ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕೋಚಿಂಗ್ ಸೆಂಟರ್ ಮಾಡಿ ಕೂಡ್ಲಿಗಿ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಮಾಡಿ ಉನ್ನತ ಹುದ್ದೆ ಸಿಗುವಂತಾಗಲಿ ಬಡ ಮಕ್ಕಳಿಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸುಲಭವಾಗಬೇಕು ಎಂದು ಕೋಚಿಂಗ್ ಸೆಂಟರ್ ತೆರೆಯಲಾಗಿದ್ದು ಮಕ್ಕಳು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಮಾತನಾಡಿ  ಹಿಂದುಳಿದ ತಾಲೂಕಿನ ಯುವಕ, ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಹೆಚ್ಚಿನ ಹಣ ಖರ್ಚು ಮಾಡುವುದರ ಜತೆಗೆ ಧಾರವಾಡ, ಮೈಸೂರು ಸೇರಿ ಇತರೆಡೆ ಹೋಗುವುದನ್ನು ಅರಿತು ತಾಲೂಕಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಮ್ಮ ತಂದೆಯವರಾದ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಅವರ ಸ್ಮರಣಾರ್ಥವಾಗಿ ನುರಿತ ತರಬೇತುದಾರರಿಂದ  ಉಚಿತ ತರಬೇತಿ ನೀಡಬೇಕೆಂಬ ನಮ್ಮ ಕನಸು ಇದೀಗ ನನಸಾಗಿದೆ.
ಪದವಿ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದು, ಸ್ಥಳೀಯವಾಗಿ ತರಬೇತಿ ಪಡೆಯುವಂಥ ಸೌಕರ್ಯ ಇಲ್ಲದಿರುವುದು ಬಹುತೇಕರು ಹಿಂದುಳಿಯುತ್ತಿದ್ದಾರೆ. ನಮ್ಮ ತಾಲೂಕು ಹಿಂದುಳಿದಿದ್ದರೂ, ಶೈಕ್ಷಣಿಕ ಪ್ರಗತಿಯಲ್ಲಿ ಮುಂದಾಗಬೇಕು ಎಂಬ ಉದ್ದೇಶದಿಂದ ಈ ಭಾಗದ ಬಡವರ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲೆಂದು ಕೋಚಿಂಗ್ ಸೆಂಟರ್ ಆರಂಭಿಸಿದ್ದು, ಇದು ಎಂದಿಗೂ ನಿಲ್ಲುವುದಿಲ್ಲ. ಅಲ್ಲದೆ, ಅನುಭವಿ ಉಪನ್ಯಾಸಕರಿಂದ ತರಬೇತಿ ನೀಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಕೆಎಎಸ್ ಸೇರಿ ನಾನಾ ಹುದ್ದೆಗಳನ್ನು ಪಡೆಯುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವಂತರಾಗಿ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಬೀಜ ನಿಗಮನದ ಸದಸ್ಯ ನಾಗರಕಟ್ಟೆ ಸಾವಜ್ಜಿ ರಾಜೇಂದ್ರಪ್ರಸಾದ್, ಪಪಂ ಸದಸ್ಯ ಕಾವಲಿ ಶಿವಪ್ಪ ನಾಯಕ ಮಾತನಾಡಿ, ಅತ್ಯಂತ ಹಿಂದುಳಿದ ಪ್ರದೇಶವಾದ ಕೂಡ್ಲಿಗಿ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಂಥ ಸಾಮರ್ಥ್ಯ ತುಂಬಲು ಉಚಿತವಾಗಿ ತರಬೇತಿ ಕೇಂದ್ರ ಆರಂಭಿಸಿರುವ ಶಾಸಕರ ಕುಟುಂಬದವರ ಕಾರ್ಯ ಜನಪರವಾಗಿದೆ ಎಂದು ತಿಳಿಸಿದರು.
ಉಪನ್ಯಾಸಕ ಕೊಟ್ರಪ್ಪನವರ ನಾಗರಾಜ ಪ್ರಾಸ್ತಾವಿಕ ನುಡಿದರು. ಈ ಸಂದರ್ಭದಲ್ಲಿ ಸರಕಾರಿ ಪಪೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯಜನ್ನು, ಕಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕುಮಾರಗೌಡ, ಮುಖಂಡರಾದ ಟಿ.ಜಿ.ಮಲ್ಲಿಕಾರ್ಜುನಗೌಡ, ಕಾನಮಡುಗು ಕೆ.ಎಂ.ಶಶಿಧರ, ಬಣವಿಕಲ್ಲು ಎರಿಸ್ವಾಮಿ, ಗುಡೇಕೋಟೆ ವಿಶಾಲಾಕ್ಷಿ ರಾಜಣ್ಣ, ತೂಲಹಳ್ಳಿ ಶಾಂತನಗೌಡ, ದಿನ್ನೆ ಮಲ್ಲಿಕಾರ್ಜುನ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವೇಶ್ವರ, ಉಪಾಧ್ಯಕ್ಷ ಜಿ.ಆರ್.ಸಿದ್ದೇಶ್, ಕಾನಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್, ಜಿ.ಓಬಣ್ಣ, ಕುರಿಹಟ್ಟಿ ಬೋಸಣ್ಣ, ಸೇರಿ ಇತರರಿದ್ದರು.