ಅದ್ಧೂರಿ ವಿಜೃಂಭಣೆಯ ಗಣೇಶ ವಿಸರ್ಜನಾ ಮಹೋತ್ಸವ
ಗೌರಿಬಿದನೂರು.ಸೆ.೧೭-ನಗರದ ಹೊರವಲಯದಲ್ಲಿರುವ ಲೀಡರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಗಣೇಶ ಹಬ್ಬದ ದಿನದಂದು ಪ್ರತಿಷ್ಟಾಪನೆ ಮಾಡಿದ್ದ ಗಣೇಶ ಮೂರ್ತಿಯನ್ನು ಭಾನುವಾರ ಶಾಲಾ ವಾಹನಗಳ ಚಾಲಕರು ಮತ್ತು ಸಿಬ್ಬಂಧಿಯ ನೇತೃತ್ವದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಿ ವಿಜೃಂಭಣೆಯ ಸಂಭ್ರಮಾಚರಣೆಯೊಂದಿಗೆ ವಿಸರ್ಜನೆ ಮಾಡಲಾಯಿತು.
೭ ದಿನಗಳ ಕಾಲ ಶಾಲೆಯಲ್ಲಿ ಪ್ರತಿಷ್ಟಾಪನೆ ಮಾಡಿದ್ದ ಗಣೇಶ ಮೂರ್ತಿಗೆ ನಿತ್ಯ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜಾ ಕೈಂಕಾರ್ಯಗಳನ್ನು ನಡೆಸುತ್ತಿದ್ದರು. ೭ ನೇ ದಿನವಾದ ಭಾನುವಾರ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ, ಪ್ರಾಂಶುಪಾಲರು ಸೇರಿದಂತೆ ಶಾಲಾ ಬೋದಕ ಸಿಬ್ಬಂಧಿ ಮತ್ತು ಬೋದಕೇತರ ಸಿಬ್ಬಂಧಿಯ ಜೊತೆಗೆ ಶಾಲಾ ಮಕ್ಕಳು ಸಂಭ್ರಮದಿಂದ ವಿಸರ್ಜನಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಕೊನೆಯ ದಿನವಾದ ಭಾನುವಾರ ಶಾಲೆಯ ವಾಹನ ಚಾಲಕರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಯ ಪ್ರಕಾರ ವಿಶೇಷ ಪೂಜಾ ಕೈಂಕಾರ್ಯವನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರಸಾದ ವಿನಿಯೋಗ ಮಾಡಿದರು.
ಗಣೇಶ ವಿಸರ್ಜನೆಗೂ ಮುನ್ನ ಶಾಲಾ ಆವರಣದಲ್ಲಿಯೇ ಗಣೇಶ ಮೂರ್ತಿಯ ಮೆರವಣಿಗೆ ಮಾಡಲಾಯಿತು. ಈ ವೇಳೆ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು, ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವಾಹನ ಚಾಲಕರು ಸೇರಿದಂತೆ ಎಲ್ಲರೂ ಕೂಡ ತಮಟೆ ವಾಧ್ಯಗಳಿಗೆ ಹೆಜ್ಜೆ ಹಾಕಿ ಕುಣಿದರು. ಈ ಸಂಭ್ರಮಾಚರಣೆಯಲ್ಲಿ ವಿದ್ಯಾರ್ಥಿಗಳ ಭಾಗಿಯಾಗಿ ಶಿಕ್ಷಕರೊಂದಿಗೆ ಕುಣಿದು ಕುಪ್ಪಳಿಸಿದರು. ಒಟ್ಟಾರೆ ಭಾನುವಾರದ ಗಣೇಶ ವಿಸರ್ಜನಾ ಕಾರ್ಯವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಉತ್ತಮ ಸಾಮರಸ್ಯ ಬೆಸೆಯಲು ಕಾರಣವಾಯಿತು.
ಈ ವೇಳೆ ಮಾತನಾಡಿದ ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥರಾದ ಬಿ.ಎಲ್.ಶಿವರಾಮರೆಡ್ಡಿ, ಲೀಡರ್ ಶಾಲೆಯು ಮಕ್ಕಳಿಗೆ ಕೇವಲ ಪಠ್ಯ ಶಿಕ್ಷಣವನ್ನು ಕಲಿಸುವುದಲ್ಲದೆ ಧಾರ್ಮಿಕ ಆಚರಣೆಗಳು,
ನಾಗರೀಕತೆ, ಸಂಸ್ಕೃತಿ, ನಾಡಿನ ಪರಂಪರೆಯ ಬಗ್ಗೆ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಶಾಲೆಯ ಕಾರ್ಯದರ್ಶಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿದರು.
ಈ ವೇಳೆ ಶಾಲಾ ಆಡಳಿತ ಮಂಡಳಿಯ ಆಡಳಿತಾಧಿಕಾರಿ ಚಂದನ್, ಟ್ರಸ್ಟಿಗಳಾದ ಆಶಾ, ಡಾ.ತೇಜಸ್ವಿನಿ, ರಕ್ಷಾ, ಪ್ರಾಂಶುಪಾಲರಾದ ಐ.ನಾಗೇಶ್ವರರಾವ್, ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗವಹಿಸಿದ್ದರು.