ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮ
ಬಂಗಾರಪೇಟೆ.ಸೆ.೧೭-ಇಂದು ಪಟ್ಟಣದ ವಾಲ್ಮೀಕಿ ಸ್ವಾಭಿಮಾನಿ ಸಂಘದ ಕಚೇರಿಯಲ್ಲಿ ಆತ್ಮವಿಶ್ವಾಸ ವೇದಿಕೆ ಹಾಗೂ ದಲಿತ ಶಕ್ತಿ ಸೇನೆ ವತಿಯಿಂದ ಭಾರತೀಯ ಮೊದಲ ಇಂಜಿನಿಯರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ನೇತೃತ್ವವನ್ನು ಆತ್ಮವಿಶ್ವಾಸ ವೇದಿಕೆ ಹಾಗೂ ದಲಿತ ಶಕ್ತಿ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸೀಸಂದ್ರ ದಿಢೀರ್ ಎಂ. ಎನ್. ಭಾರದ್ವಾಜ್ ಅವರು ವಹಿಸಿದ್ದರು.
ಈ ಕುರಿತು ಅವರು ಮಾತನಾಡುತ್ತಾ, ವಿಶ್ವೇಶ್ವರಯ್ಯ ಅವರು ಇಂಜಿನಿಯರ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಇಡೀ ವಿಶ್ವಕ್ಕೆ ದಾರಿದೀಪವಾಗಿದ್ದಾರೆ. ಇವರು ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸಿ ಬಾರಿ ಹೆಸರು ಗಳಿಸಿ ಸಾಧನೆ ಮಾಡಿದ್ದಾರೆ. ಇನ್ನೂ ಒಂದು ವಿಚಾರವೇನೆಂದರೆ ನಮ್ಮ ಕೋಲಾರ ಜಿಲ್ಲೆಯ ತಾಲ್ಲೂಕಿನ ಬೂದಿಕೋಟೆ ಮಾರ್ಕಂಡೇಯ ಡ್ಯಾಮ್ ಗೆ ಪ್ಲಾನಿಂಗ್ ಇವರೇ ಮಾಡಿಕೊಟ್ಟಿದ್ದು ಎಂದು ಗುಣಗಾನ ಮಾಡಿದರು.
ಆದರಿಂದ ಇವರ ಆದರ್ಶ ತತ್ವಗಳನ್ನು ಇಂದಿನ ಯುವ ಪೀಳಿಗೆ ಪ್ರತಿಯೊಬ್ಬರೂ ಪಾಲಿಸಿದಾಗ ಸಮಾಜ ನಿರ್ಮಾಣ ಮಾಡಬಹುದೆಂದು ತಿಳಿಸಿದರು. ಪ್ರತಿಯೊಬ್ಬ ಭಾರತೀಯರು ಸಹ ತಮ್ಮ ಮನೆಗಳಲ್ಲಿ ಇಂಜಿನಿಯರ್ ವಿಶ್ವೇಶ್ವರಯ್ಯ ಅವರ ಜಯಂತಿಯನ್ನು ಆಚರಿಸಬೇಕು ಹಾಗೂ ಇಂದಿನ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ಅವರ ಪುಸ್ತಕಗಳನ್ನು ಅಧ್ಯಯನ ಮಾಡಿ ಅವರ ಗುಣ ಹಾಗೂ ಸಾಧನೆಯನ್ನು ಸ್ಪೂರ್ತಿಯನ್ನು ತೆಗೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುನಿಯಪ್ಪ, ವೆಂಕಟಪ್ಪ, ಕಲಾವಿದ ಚಂದ್ರಪ್ಪ, ಸುನಿಲ್, ಪ್ರವೀಣ್, ನಾಗರಾಜ್, ರಾಮಪ್ಪ, ರಾಮಕೃಷ್ಣಪ್ಪ, ಹಾಗೂ ಇನ್ನು ಮುಂತಾದವರು ಭಾಗವಹಿಸಿದ್ದರು.