ಮನೆತನ ಏಳಿಗೆಗೆ  ಮಕ್ಕಳು ಸಂಸ್ಕಾರವಂತರಾಗಲಿ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಮಾ.09:ಜೀವನದಲ್ಲಿ  ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಸಂಸ್ಕಾರವಂತರಾಗಬೇಕು  ಎಂದು ದಾನಿ ಅಕ್ಕಿ ಕೊಟ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ತಂಬ್ರಹಳ್ಳಿಯಲ್ಲಿ ಕಿನ್ನಾಳ ಪೊರಮಾಂಬೆ ಗುರುಸಿದ್ದಪ್ಪ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಏನಾದರೂ ಆಗು ಮೊದಲು ವಿದ್ಯಾವಂತ ಆಗಬೇಕು, ವಿದ್ಯೆ ಇಲ್ಲದೇ ಏನೂ ಸಾಧನೆ ಮಾಡಲು ಅಸಾಧ್ಯ ಉತ್ತರ ಪ್ರದೇಶದ 500 ಕುಟುಂಬಗಳು ವಾಸವಿರುವ ಒಂದು ಹಳ್ಳಿಯಲ್ಲಿ 145 ಮಂದಿ ಐಎಎಸ್‌ ಪಾಸ್ ಆಗಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಬೆರಳಿಣೆಕೆಯಲ್ಲಿದ್ದಾರೆ.  ವಿದ್ಯಾರ್ಥಿಗಳು  ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ಪಡೆಯಲು ನಿರಂತರವಾಗಿ ಅಭ್ಯಾಸದಲ್ಲಿ ತೊಡಗಬೇಕು, ದೊಡ್ಡದಾದ ಐಎಎಸ್‌ ಐಪಿಎಸ್ ನಂತಹ  ಕನಸ್ಸುಗಳನ್ನು ಹೊಂದಿರಬೇಕು ಆದಾಗ ಮಾತ್ರ ಉನ್ನತ ಸ್ಥಾನ ದೊರೆಯುವುದು. ಹಾಗೇನೆ ಒಂದು ಮನೆ ಏಳ್ಗೆಗೆಗೆ ಉತ್ತಮ ಮಕ್ಕಳು ಕಾರಣರಾಗುತ್ತಾರೆ. ಅಂತಹ ಮಕ್ಕಳಿದ್ದರೆ ತಂದೆ ತಾಯಂದಿರುಗಳು ತಮ್ಮ ಜೀವನದ ಸಾರ್ಥಕತೆ ಪಡೆಯುತ್ತಾರೆ ಎಂದು ತಮ್ಮ ಸಂಸಾರದ ಕಥೆ ಬಿಚ್ಚಿಟ್ಟರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಕ್ಕಿ ಶಿವಕುಮಾರ್ ಮಾತನಾಡಿ ನಾನು ಓದಿದ ಶಾಲೆಯಲ್ಲಿ ಸುವರ್ಣಮಹೋತ್ಸವ ಆಚರಣೆ ಮಾಡಿದ್ದು ನನ್ನ ತಂದೆಯರು ನಮ್ಮ ಅಜ್ಜಿಯ ಹೆಸರಿನಲ್ಲಿ ಅಕ್ಕಿ ಬಸಮ್ಮ ತೋಟಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಬೆಳ್ಳಿ ಹಬ್ಬ ಆಚರಿಸಿದ್ದು ನನ್ನ ಓದಿನ ಅವಧಿಯಲ್ಲಿನ ಸ್ನೇಹಿತರು ಒಟ್ಟು ಗೂಡಿ ಗುರುವಂದನಾ ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು
ಈ ವೇಳೆ 50 ವರ್ಷದ ಹಳೆಯ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ನಿವೃತ್ತಿ ಹೊಂದಿದ ತಮ್ಮ ಗುರುಗಳಿಗೆ  ಪಾದ ಪೂಜೆ ನೆರವೇರಿಸಿ ಪುಷ್ಪ ಸಮರ್ಪಿಸಿದರು. ಆಗಮಿಸಿದ  ಗುರು ಗಳಿಗೆ ಹಾಗೂ ಅತಿಥಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ  ನಿವೃತ್ತ ಶಿಕ್ಷಕರಾದ ಎಸ್ ಎಂಎಸ್ ಶಿವಮೂರ್ತಿ, ಹಾಲಪ್ಪ ಮಾಸ್ತರ, ಬಿಕೆ.ನಾಲ್ವಾಡ್, ಹಾಗೂ ಇತರ ನಿವೃತ್ತಿ ಹೊಂದಿದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದ ಕುಟುಂಬದವರು, ಮುಖ್ಯ ಅತಿಥಿಗಳಾಗಿ ಕಿನ್ನಾಳ ಶಿವಾನಂದ್ ವಕೀಲರು, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಹಾಗೂ ಅಕ್ಕಿ ಕುಟುಂದವರು  ವಿವಿ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.
ಮುಖ್ಯಶಿಕ್ಷಕ ಕೆವಿ ಲೋಕೇಶ್, ಪಟ್ಟಣಶೆಟ್ಟಿ ಸುರೇಶ್, ಹಾಗೂ ಸೊಬಟಿ ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು.