ಹೆಣ್ಣು, ಗಂಡು ಎನ್ನುವ ಭಾವನೆ ಇಲ್ಲದೆ, ವೈಚಾರಿಕ ಪ್ರಜ್ಞೆಗಳನ್ನು ಮೂಡಿಸಿಕೊಳ್ಳಿ.ಮಹಿಳೆ ರಾಜಕಾರಣಕ್ಕೆ ಬರಲು ಸಾಕಷ್ಟು ಶ್ರಮ ಬೇಕಿದೆ: ಶಾಸಕಿ ಎಂ.ಪಿ.ಲತಾ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಮಾ.9; ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಅಸ್ತಿತ್ವ ಸಾಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ತಾಲೂಕಿನ ತೆಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಎಂ.ಪಿ.ರವೀಂದ್ರ ಪ್ರತಿಷ್ಠಾನ ವತಿಯಿಂದ ಅಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಇಂದು ರಾಜಕೀಯದಲ್ಲಿ ಮುಂದೆ ಬರಬೇಕಾದರೆ ಬಹಳಷ್ಟು ಕಷ್ಟಪಡಬೇಕಿದೆ, ಆರಂಭದಲ್ಲಿ ನಾನು ಸಹ ಸಾಕಷ್ಟು ಕಷ್ಟಪಟ್ಟಿದ್ದೇನೆ, ಸಹೋದರ ಎಂ.ಪಿ.ರವೀಂದ್ರ ನಿಧನದ ನಂತರ ನಾನು ಹರಪನಹಳ್ಳಿ ಕ್ಷೇತ್ರಕ್ಕೆ ಬಂದಾಗ ನನ್ನ ಜೊತೆ ಕೇವಲ ನಾಲ್ಕು ಜನ ಮಹಿಳೆಯರಿದ್ದರು, ಇಂದು ಸಾವಿರಾರು ಮಹಿಳೆಯರು ಹೊರ ಬಂದು ನನಗೆ ರಾಜಕೀಯ ಶಕ್ತಿ ತುಂಬಿದ್ದಾರೆ ಎಂದು ಸ್ಮರಿಸಿದರು.
ತುಮಕೂರಿನ ಶಿಕ್ಷಕಿ ರಂಗಮ್ಮ ಹೊದೆಕಲ್ ಮಾತನಾಡಿ ಭಾಷಣದಿಂದ ಸಮಾಜ ಬದಲಾಯಿಸಲು ಸಾಧ್ಯವಿಲ್ಲ, ಹರಿವು ಮೂಡಿಸುವ ಮೂಲಕ ಸಮಾಜ ಬದಲಾಯಿಸಬಹುದು ಹಾಗಾಗಿ ಪ್ರತಿಯೊಬ್ಬರೂ ಹರಿವು ಬಿತ್ತುವ ಕೆಲಸ ಮಾಡಬೇಕಿದೆ ಎಂದರು.
ಹೆಣ್ಣು-ಗಂಡು ಎಂದು ಭೇದ ಮಾಡದೇ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು, ಪರಸ್ಪರ ಪ್ರೀತಿ ವಿಶ್ವಾಸದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾದೇವಿ ಸಂವಿಧಾನದ ಮೂಲಕ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ ಹಾಗಾಗಿ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ ಎಂದ ಅವರು ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸಿಮೀತವಾಗದೇ ನಿತ್ಯ ಮಹಿಳೆಯರನ್ನು ಗೌರವದಿಂದ ಕಾಣಬೇಕೆಂದರು.
ವಿವಿಧ ಸರ್ಕಾರಿ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 50 ಮಹಿಳಾ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತೆಲಗಿ ಗ್ರಾಪಂ ಅಧ್ಯಕ್ಷೆ ರೇಖಾ ಗಣೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಪುರಸಭಾ ಸದಸ್ಯರಾದ ಲಾಟಿ ದಾದಪೀರ್ ಗಣೇಶ್, ತಹಶೀಲ್ದಾರ್ ಗಿರೀಶ್ ಬಾಬು, ಬಿಸಿಎಂ ಇಲಾಖೆಯ ವಿಜಯಲಕ್ಷ್ಮೀ ಹತ್ತಿಕಾಳ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಕಿರಣ್, ತಾ.ಪಂ.ಇಒ ಚಂದ್ರಶೇಖರ್, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ರಂಗಪ್ಪನವರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ ಕಿರಣ್ ಕಂಚಿಕೇರಿ ಜಯಲಕ್ಷ್ಮೀ, ಭಾಗ್ಯಮ್ಮ, ಎಚ್.ಟಿ.ವನಜಾಕ್ಷಿ, ಧನಂಜಯ, ಯೋಗೇಶ, ಹರೀಶ, ಮತ್ತೂರು ಬಸವರಾಜ, ವಿವಿಧ ಇಲಾಖೆಯ ರಂಜಿತಾ, ಅಶ್ವಿನಿ, ಮಂಜುಳಾ, ಪ್ರತಿಭಾ, ಗೌರಮ್ಮ, ವಸಂತಮ್ಮ, ಜಯಲಕ್ಷ್ಮಿ, ದ್ವಾರಕೀಶ್ ಸೇರಿದಂತೆ ಇತರರು ಇದ್ದರು.