ನೇರ ಬಸ್ ಸೌಲಭ್ಯ
ಹುಬ್ಬಳ್ಳಿ,ಮಾ9 : ಸಾರ್ವಜನಿಕರ ಬಹುದಿನಗಳ ಬೇಡಿಕೆಯಂತೆ ವಾಣಿಜ್ಯ ನಗರಿ ಹಾಗೂ ಶ್ರೀ ಸಿದ್ಧಾರೂಢರ ಪುಣ್ಯಭೂಮಿಯಿಂದ ಸಗರನಾಡಿನ ಕಾಲಜ್ಞಾನಿ ಕೊಡೇಕಲ್ಲ ಶ್ರೀ ಬಸವೇಶ್ವರರ ನಾಡಿಗೆ ನೇರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ- ಕೊಡೇಕಲ್ಲ-ಹುಣಸಗಿ ನಡುವೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಹೊಸೂರು ಬಸ್ ನಿಲ್ದಾಣದಲ್ಲಿ ನೂತನ ಬಸ್ ಮಾರ್ಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ, ವ್ಯಾಪಾರ, ಉದ್ಯೋಗ ಮತ್ತಿತರ ಕಾರಣಗಳಿಂದ ಕಲ್ಯಾಣ ಕರ್ನಾಟಕ ಭಾಗದ ಸಗರನಾಡಿನಿಂದ ಬಹಳಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಹುಬ್ಬಳ್ಳಿಗೆ ಬಂದು ಹೋಗುತ್ತಾರೆ. ಆದರೆ ಅವರಿಗೆ ಹುಬ್ಬಳ್ಳಿಗೆ ನೇರ ಬಸ್ ಸೌಲಭ್ಯವಿರಲಿಲ್ಲ.ಅದರಿಂದಾಗಿ ಎರಡು, ಮೂರು ಬಸ್ಸುಗಳನ್ನು ಬದಲಾಯಿಸಿ ಪ್ರಯಾಣ ಮಾಡುವ ಅನಿವಾರ್ಯತೆ ಇತ್ತು.ಚಿಕ್ಕ ಮಕ್ಕಳು ಲಗ್ಗೇಜುಗಳೊಂದಿಗೆ ಮಹಿಳೆಯರು ಸೇರಿದಂತೆ ನೇರ ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿತ್ತು. ಅವರ ಅನುಕೂಲಕ್ಕಾಗಿ ಕಾಲಜ್ಞಾನಿ ಕೊಡೇಕಲ್ಲ ಬಸವೇಶ್ವರರ ಸಗರನಾಡಿನಿಂದ ವಾಣಿಜ್ಯ ರಾಜಧಾನಿ ಹಾಗೂ ಸಿದ್ಧಾರೂಡರ ಪುಣ್ಯಭೂಮಿ ಹುಬ್ಬಳ್ಳಿ ನಡುವೆ ನೇರ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬಹುದಿನಗಳಿಂದ ಮನವಿ ಮಾಡಿಕೊಂಡಿದ್ದರು.
ಮಹಾ ಶಿವರಾತ್ರಿ ಪ್ರಯುಕ್ತ ಕೊಡೆಕಲ್ಲ ಬಸವೇಶ್ವರ ದೆವಸ್ಥಾನದಲ್ಲಿ `ಕಾಲಜ್ಞಾನದ ಶಿವರಾತ್ರಿ ನುಡಿ’ ಹಾಗೂ ಸಿದ್ಧಾರೂಢ ಜಾತ್ರೆಯ ಮುನ್ನಾದಿನ ಹುಬ್ಬಳ್ಳಿ- ಕೊಡೆಕಲ್ಲ- ಹುಣಸಗಿ ಮಾರ್ಗದಲ್ಲಿ ವೇಗದೂತ ಬಸ್ ಸಂಚಾರವನ್ನು ಆರಂಭಿಸಿರುವುದು ಭಕ್ತರು ಹಾಗೂ ಸಾರವಜನಿಕರಲ್ಲಿ ಸಂತಸ ಉಂಟು ಮಾಡಿದೆ.
ಹುಬ್ಬಳ್ಳಿಯಿಂದ ಹುಣಸಗಿಗೆ ಹೋಗುವ ಬಸ್ಸು ಹೊಸೂರು ಬಸ್ ನಿಲ್ದಾಣದಿಂದ ಮಧ್ಯಾಹ್ನ 3 -00 ಗಂಟೆಗೆ ಹೊರಡುತ್ತದೆ. ಈ ಬಸ್ಸು ನವಲಗುಂದ, ನರಗುಂದ, ಬಾಗಲಕೋಟೆ, ಮುದ್ದೆಬಿಹಾಳ, ನಾಲತವಾಡ, ನಾರಾಯಣಪುರ, ಕೊಡೇಕಲ್ಲ ಮಾರ್ಗವಾಗಿ ರಾತ್ರಿ 10-00 ಗಂಟೆಗೆ ಹುಣಸಗಿಗೆ ತಲುಪುತ್ತದೆ.
ಹುಣಸಗಿಯಿಂದ ಹುಬ್ಬಳ್ಳಿಗೆ ಬರುವ ಬಸ್ಸು ಹುಣಸಗಿಯಿಂದ ಬೆಳಿಗ್ಗೆ 5-30ಕ್ಕೆ ಹೊರಡುತ್ತದೆ. ಹುಬ್ಬಳ್ಳಿಗೆ ಮಧ್ಯಾಹ್ನ 1-00 ಗಂಟೆಗೆ ಆಗಮಿಸುತ್ತದೆ.
ವಿದ್ಯಾರ್ಥಿಗಳು, ಸಾರ್ವಜನಿಕರು, ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಈ ಮಾರ್ಗದಲ್ಲಿ ರಾತ್ರಿ ಸಾರಿಗೆ ಬಸ್ ಸಂಚಾರವನ್ನು ಸಹ ಆರಂಭಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಭಾಗೀಯ ಸಂಚಾರ ಅಧಿಕಾರಿ ಕೆ.ಎಲ್.ಗುಡೆಣ್ಣವರ, ಸಂಚಾರ ಅಧೀಕ್ಷಕ ಐ.ಜಿ.ಮಾಗಾಮಿ, ನಿಲ್ದಾಣಾಧಿಕಾರಿ ಸುಭಾಸ ಮತ್ತಿತರರು ಇದ್ದರು.