ಪ್ರೇಕ್ಷಕರ ಮನಸೂರೆಗೊಂಡ ವಿಶ್ವಗುರು ಬಸವಣ್ಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.09: ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ನಿನ್ನೆ ರಾತ್ರಿ  ಅಭಿನಯ ಕಲಕೇಂದ್ರದವರಿಂದ ಪ್ರದರ್ಶನಗೊಂಡ ನಾಟಕ ಬಸವಣ್ಣ ನೆರೆದಿದ್ದ ಭಕ್ತ ಸಮೂಹದ ಪ್ರೇಕ್ಷಕರ ಮನಸೂರೆಗೊಂಡಿತು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಯಾಳ್ಪಿ ಮೇಟಿ ಪಂಪನಗೌಡ ಅವರು ಪ್ರತಿ ವರ್ಷದಂತೆ ಈ ವರ್ಷ ಈ ನಾಟಕ ಪ್ರದರ್ಶನ ಆಯೋಜಿಸಿದ್ದರು. ಮಾದೇವ ಬಣಕಾರ್ ವಿರಚಿತ ರಂಗಕರ್ಮಿ ಕೆ. ಜಗದೀಶ್ ನಿರ್ದೇಶನದ “ವಿಶ್ವಗುರು ಬಸವಣ್ಣ” ನಾಟಕ ಪ್ರೇಕ್ಷಕರ  ಮನ ಸೆಳೆಯಿತು ನಂತರ ಗೂಳ್ಯಂ ಗಾದಿಲಿಂಗಪ್ಪ ಅವರ ನಾಟಕವೂ ಪ್ರದರ್ಶನಗೊಂಡಿತು.
ಇದಕ್ಕೂ ಮುನ್ನ ಇಂದ್ರಾಣಿ ಕಲಾ ಟ್ರಸ್ಟ್, ನೋಪುರ ಕಲಾ ಟ್ರಸ್ಟ್, ಪ್ರಗತಿ ಕಲಾ ಟ್ರಸ್ಟ್, ನಟರಾಜ್ ಕಲಾ ಟ್ರಸ್ಟ್ ಗಳಿಂದ ಭರತನಾಟ್ಯ ಪ್ರದರ್ಶಿಸಿಸಲಾಯ್ತು.‌
ಕಾರ್ಯಕ್ರಮವನ್ನು ಕಲ್ಯಾಣ ಸ್ವಾಮಿಗಳು ಉದ್ಘಾಟಿಸಿ, ಬಸವಣ್ಣ ಆದರ್ಶ ವ್ಯಕ್ತಿ,  ಅಕ್ಕ ನಾಗಲಾಂಬಿಕೆಯ ಬೆಂಬಲದಿಂದ ಬಸವಣ್ಣನವರು ವಿಶ್ವಗುರುವಾದರು. ಇಂದು  ವಿಶ್ವ ವಿಶ್ವ ಮಹಿಳಾ ದಿನಾಚರಣೆಯೂ ಹೌದು  ಕಾರಣ ನಾವೆಲ್ಲರೂ ಅಕ್ಕನಾಗಲಂಬಿಕೆಯ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ. ಹೆಚ್. ಎಂ. ಬಸವರಾಜ್ ಮಾತನಾಡಿ, ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಣೆ ಮಾಡಿದೆ. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿ,  ಅಲ್ಲಿ  ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ಘೋಷಣೆ ಮಾಡಿದೆ.  ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಖಡ್ಡಾಯವಾಗಿವಹಾಕಲು ಸೂಚಿಸಿದೆ. ಬಸವಣ್ಣನವರ ವಚನಗಳು 27 ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿವೆ ಪಠ್ಯಪುಸ್ತಕಗಳಲ್ಲಿ ಬಸವಣ್ಣನವರ ಜೀವನ ಚರಿತ್ರೆಯನ್ನು ಸರ್ಕಾರ ಅಳವಡಿಸಿದೆ. ಶಿವಮೊಗ್ಗದ ಫ್ರೀಡಂ ಪಾರ್ಕಿಗೆ ಅಲ್ಲಮ ಪ್ರಭುದೇವರ ಹೆಸರಿಟ್ಟಿದ್ದಾರೆಂದು ಹೇಳಿದರು.
ಸಮಾರಂಭದಲ್ಲಿ ಯಾಳ್ಪಿ  ಪಂಪನಗೌಡ, ಬಸವನಗೌಡ , ಹಿರಿಯ ವಕೂಲರಾದ ಎನ್. ಅಯ್ಯಪ್ಪ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ, ಎ.ಜಿ. ಶಿವಕುಮಾರ ಗೌಡ, ಕೆ.ಎಂ.ಮಹೇಶ್ವರಸ್ವಾಮಿ,  ಕೆರೆನಳ್ಳಿ ಚಂದ್ರಶೇಖರ್, ಕಲ್ಗುಡಿ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.  ಕೆ. ಎಂ. ಪಿ. ವೀರೇಶಸ್ವಾಮಿ ಸ್ವಾಗತಿಸಿ, ವಂದಿಸಿದರು.  ತಿಮ್ಮೇಗೌಡ ನಿರೂಪಿಸಿದರು.