ಮಹಿಳಾ ಪೌರ ಕಾರ್ಮಿಕರಿಗೆ ದಂತ ತಪಾಸಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.9: ಅಂತರಾಷ್ಟೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಿನ್ನೆ ನಗರದ ಗಾಂಧಿಭವನದಲ್ಲಿ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿತ್ತು.
ಭಾರತೀಯ ದಂತ ವೈದ್ಯರ ಸಂಘವು,  ಪಾಲಿಕೆ ಸದಸ್ಯ   ಎಂ.ಪ್ರಭಂಜನ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಉಚಿತ ದಂತ ತಪಾಸಣಾ ಶಿಬಿರವನ್ನು ಮೇಯರ್ ಬಿ.ಶ್ವೇತಾ ಉದ್ಘಾಟಿಸಿ, ಬಳಿಕ ಮಾತನಾಡಿದ ಮಹಿಳಾ ಪೌರ ಕಾರ್ಮಿಕರು ಯಾವುದೇ ಬೇಧಭಾವ ಇಲ್ಲದೇ ನಗರದಲ್ಲಿ ಸ್ವಚ್ಛತಾ ಸೇವೆ ಮಾಡುವ ಮೂಲಕ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಅಂತಹ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವಲ್ಲಿ ನಾವೆಲ್ಲರೂ ಮುಂದಾಗಬೇಕೆಂದರು.
ಶಿಬಿರದ ಆಯೋಜಕ, ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್ ಮಾತನಾಡಿ, ಪೌರ ಕಾರ್ಮಿಕರು ಕೇವಲ ನಗರವನ್ನು ಮಾತ್ರ ಸ್ವಚ್ಛ ಮಾಡುತ್ತಿಲ್ಲ. ಅವರ ಸ್ವಚ್ಛತಾ ಕೆಲಸದಲ್ಲಿ ನಮ್ಮೆಲ್ಲರ ಆರೋಗ್ಯವಿದೆ. ನಾವಿಂದು ಉತ್ತಮವಾಗಿ ಆರೋಗ್ಯವಾಗಿದ್ದೇವೆ ಎಂದರೆ ಅದಕ್ಕೆ ಪೌರ ಕಾರ್ಮಿಕರ ಕೊಡುಗೆ ಕಾರಣ. ಪೌರ ಕಾರ್ಮಿಕರು, ಮಹಿಳಾ ಪೌರ ಕಾರ್ಮಿಕರು ಸಮಸ್ಯೆಗಳಿಗೆ ಸ್ಪಂದಿಸಲು, ಸಹಾಯ, ಸಹಕಾರ ನೀಡಲು ನಾವು ಸದಾ ಸಿದ್ಧರಿದ್ದೇವೆ ಎಂದರು.
ಬಳಿಕ ನಡೆದ ದಂತ ತಪಾಸಣಾ ಶಿಬಿರದಲ್ಲಿ ಭಾರತೀಯ ದಂತ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ. ಮಧುಸೂದನ್, ಕಾರ್ಯದರ್ಶಿ ಡಾ. ಶ್ರೀಧರ್, ಖಜಾಂಚಿ ಡಾ. ರಾಜೀವ್, ಸಂಘದ ರಾಜ್ಯಘಟಕದ ಸದಸ್ಯರಾದ ಡಾ. ಭಾವನಾ, ಡಾ. ವಾಣಿಶ್ರೀ, ಡಾ. ಶ್ವೇತಾ ಅವರು, ಮಹಿಳಾ ಪೌರ ಪೌರಕಾರ್ಮಿಕರಿಗೆ ದಂತ ತಪಾಸಣೆ ಮಾಡಿದರು.  3೦೦ ಜನ ಮಹಿಳಾ ಪೌರ ಕಾರ್ಮಿಕರು ದಂತ ತಪಾಸಣೆಗೆ ಒಳಗಾಗಿದ್ದು, ಈ ಪೈಕಿ 170 ಮಹಿಳೆಯರಲ್ಲಿ ದಂತ ಸಮಸ್ಯೆಗಳು ಕಂಡುಬಂದಿತು. ಇವರಿಗೆ ಔಷಧ, ಹಲ್ಲುಜ್ಜಲು ಪೇಸ್ಟ್, ಮುಲಾಮು, ಮಾತ್ರೆಗಳನ್ನು ವಿತರಿಸಲಾಯಿತು. ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಮಾಡುವುದಾಗಿ ವೈದ್ಯರು ತಿಳಿಸಿದರು.
ಈವೇಳೆ ಇಬ್ಬರು ಹಿರಿಯ ಪೌರ ಕಾರ್ಮಿಕ ಮಹಿಳೆಯರಿಗೆ ಸನ್ಮಾನಿಸಲಾಯಿತು.  ಉಪಮೇಯರ್ ಬಿ.ಜಾನಕಿ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಸದಸ್ಯರಾದ ಮಿಂಚುಶ್ರೀನಿವಾಸ್, ಮುಖಂಡರಾದ ಬಿ.ಆರ್.ಎಲ್.ಶ್ರೀನಿವಾಸ್, ಗೋವಿಂದರಾಜುಲು ಮೊದಲಾದವರು ಇದ್ದರು.
One attachment • Scanned by Gmail