ರಾಷ್ಟ್ರೀಯ ಉಪಾಧ್ಯಕ್ಷರಾಗಿ ಶಿಕ್ಷಕ ಶಿವಕುಮಾರ್ ಆಯ್ಕೆ
ವಿಜಯಪುರ, ಮಾ.೯: ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ವಿಜಯಪುರದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ವಿಜಯಪುರ ಲೀಜನ್ ನ ಅಧ್ಯಕ್ಷರಾದ ಡಾ.ಎಂ.ಶಿವಕುಮಾರ್ ರವರು ಆಯ್ಕೆಯಾಗಿದ್ದಾರೆ.
ಇವರು ಕೇರಳ ರಾಜ್ಯದ ಕಣ್ಣೂರಿನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅಲ್ಲಿ ಹತ್ತು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ವಿಜಯಪುರದ ಸೀನಿಯರ್ ಛೇಂಬರ್ ಗೆ ಲಭಿಸಿದೆ. ರಾಷ್ಟ್ರ ಮಟ್ಟದ ಅತ್ಯುತ್ತಮ ಲೀಜನ್ ಅಧ್ಯಕ್ಷ, ಅತ್ಯುತ್ತಮ ಅಭಿವೃದ್ಧಿ ಮತ್ತು ಬೆಳವಣಿಗೆ, ಕಾರ್ಯಕ್ರಮ ಗಳು, ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳು, ರಾಷ್ಟ್ರೀಯ ಅಧ್ಯಕ್ಷರ ವಿಶೇಷ ಮನ್ನಣೆಗಳು, ಹಾಗೂ ವಿಜಯಪುರದ ಸೀನಿಯರ್ ಜಯರಾಮ್ ರವರಿಗೆ ಅತ್ಯುತ್ತಮ ರಾಷ್ಟ್ರೀಯ ಸಂಯೋಜಕ ಪ್ರಶಸ್ತಿಗಳು ಲಭಿಸಿವೆ.
ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷರಾದ ಪ್ರೋ.ವರ್ಗಿಸ್ ವೈದ್ಯನ್ ರವರು ವಿಜಯಪುರ ಸೀನಿಯರ್ ಛೇಂಬರ್ ಈ ವರ್ಷ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡಿ, ಜನಮನ್ನಣೆ ಗಳಿಸಿದೆ. ಈ ಲೀಜನ್ ಅಧ್ಯಕ್ಷರಾದ ಶಿವಕುಮಾರ್ ಹಾಗೂ ರಾಷ್ಟ್ರೀಯ ಸಂಯೋಜಕರಾದ ಎನ್ ಜಯರಾಮ್ ರವರನ್ನು ಒಳಗೊಂಡಂತೆ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಸೀನಿಯರ್ ಛೇಂಬರ್ ನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಜಯಪುರ ಲೀಜನ್‌ನ ಅಧ್ಯಕ್ಷರಾದ ಶಿವಕುಮಾರ್ ರವರು ನಮ್ಮ ಇಡೀ ತಂಡದ ಸಹಕಾರದಿಂದ ಈ ಪ್ರಶಸ್ತಿಗಳು ಪಡೆಯಲು ಸಾಧ್ಯವಾಯಿತು. ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು, ೨೦೨೪-೨೫ ನೇ ಸಾಲಿನಲ್ಲಿ ತಾವು ಉತ್ತಮ ಸೇವೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಲೀಜನ್‌ನ ಎಸ್.ರಮೇಶ್, ವಸಂತ್ ಕುಮಾರ್, ಮುನಿಕೃಷ್ಣಪ್ಪ, ಅನೀಸ್-ಊರ್-ರೆಹಮಾನ್, ಆನಂದ್, ನಿಕಟ ಪೂರ್ವ ರಾಷ್ಟ್ರೀಯ ಅಧ್ಯಕ್ಷರಾದ ಭರತ್ ದಾಸ್, ಪೊಲೀಸ್ ಇಲಾಖೆಯ ನಿವೃತ್ತ ಡಿ.ಜಿ.ಪಿ ಡಾ||ಸಂಧ್ಯಾ, ರಾಷ್ಟ್ರೀಯ ಕಾರ್ಯದರ್ಶಿ ಜೋಸ್ ಕಂಡೋತ್, ಮತ್ತಿತರರು ಉಪಸ್ಥಿತರಿದ್ದರು.