ಮಹಾಶಿವರಾತ್ರಿ: ನಂಜುಡೇಶ್ವರನ ಸನ್ನಿಧಿಗೆ ಹರಿದುಬಂದ ಭಕ್ತ ಸಾಗರ
ಸಂಜೆವಾಣಿ ವಾರ್ತೆ
ನಂಜನಗೂಡು: ಮಾ.09:- ದಕ್ಷಿಣ ಕಾಶಿ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಶ್ರೀ ಶ್ರೀಕಂಠೇಶ್ವರನ ಸನ್ನಿಧಿಗೆ ಶುಕ್ರವಾರ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರ ಸಾಗರವೇ ಹರಿದು ಬಂದಿತ್ತು.
ಮಹಾಶಿವರಾತ್ರಿಯ ಜಾಗರಣೆಯ ಪ್ರಯುಕ್ತ ರಾತ್ರಿಯಿಡೀ ಶಿವನಾಮ ಸ್ಮರಣೆ, ಜಾಗರಣೆ ಮಾಡುವ ಮೂಲಕ ಜನರು ಭಕ್ತಿ ಸಾಗರದಲ್ಲಿ ಮಿಂದೆದ್ದು ದೇವರ ಕೃಪೆಗೆ ಪಾತ್ರರಾದರು.
ಶುಕ್ರವಾರ ಮುಂಜಾನೆ 4.30 ರಿಂದಲೇ ಕಪಿಲಾನದಿಯಲ್ಲಿ ಮಿಂದು ದೇವರ ದರ್ಶನಕ್ಕಾಗಿ ಸಾಲು ಗಟ್ಟಿ ನಿಂತಿದ್ದರು. ಮಹಾಶಿವರಾತ್ರಿ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬೆಳಿಗ್ಗೆ 5 ಗಂಟೆಗೆ ಉಷಾಕಾಲದ ಪೂಜೆಯಲ್ಲಿ, ಕ್ಷೀರಾಭಿಷೇಕ, ಪದ್ಯಾಭಿಷೇಕ, ಫಲ ಪಂಚಾಮೃತಾಭಿಷೇಕ, ಮಾಹಾನ್ಯಾಸಕ ಪೂರ್ವಕವಾಗಿ ಏಕದಶಾವರ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಶಾಲ್ಯನ್ನ, ಮಹಾ ಮಂಗಳಾರತಿ ನೆರವೇರಿಸಿ ಭಕ್ತರ ದರ್ಶನಕ್ಕೆ ಅನುವುಮಾಡಿಕೊಡಲಾಗಿತ್ತು.
ದೇವಾಲಯದ ಆವರಣದ ಮುಂಭಾಗದಲ್ಲಿ ಭಕ್ತರು ಉರುಳು ಸೇವೆ, ಧೂಪಸೇವೆ, ತಲಾಭಾರ ಸೇವೆಗಳನ್ನು ನೆರವೇರಿಸಿದರು. ಕಪಿಲಾ ನದಿಯಲ್ಲಿ ದೀಪಗಳನ್ನು ತೇಲಿ ಬಿಟ್ಟು ಹರ್ಷ ವ್ಯಕ್ತಪಡಿಸಿದರಲ್ಲದೆ ದೇವರ ಹುಂಡಿಗೆ ಹರಕೆ ಬೆಳ್ಳಿ, ಚಿನ್ನದ ಪದಾರ್ಥಗಳನ್ನು ಹಾಕಿ ಹರಕೆ ತೀರಿಸಿ ಭಕ್ತಿ ಮೆರೆದರು.
ನಂತರ ದೇಗುಲದಲ್ಲಿ ಪ್ರಾತಃಕಾಲ, ಸಂಗಮಕಾಲ, ಮದ್ಯಮಕಾಲದ ಪೂಜೆಗಳನ್ನು ನೆರವೇರಿಸಿದ ಬಳಿಕ ಸಂಜೆ 6 ಗಂಟೆಗೆ ಮೊದಲ ಜಾವದ ಪೂಜೆ, ರಾತ್ರಿ 9 ಗಂಟೆಗೆ 2 ನೇ ಜಾವದ ಪೂಜೆ, ರಾತ್ರಿ 12 ಗಂಟೆಗೆ 3 ನೇ ಜಾವದ ಪೂಜೆ, ಮತ್ತು 3 ಗಂಟೆಗೆ 4 ನೇ ಜಾವದ ಪೂಜಾ ವಿಧಿಗಳು ಸಾಂಗೋಪವಾಗಿ ನಡೆದವು. ಪ್ರತಿ ಜಾವದ ಪೂಜೆಯಲ್ಲೂ ಕೂಡ ಕ್ಷೀರಾಭಿಷೇಕ, ಪದ್ಯಾಭಿಷೇಕ, ಫಲ ಪಂಚಾಮೃತಾಭಿಷೇಕ, ಮಾಹಾನ್ಯಾಸಕ ಪೂರ್ವಕವಾಗಿ ಏಕದಶಾವರ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಶಾಲ್ಯನ್ನ, ಮಹಾ ಮಂಗಳಾರತಿ ನೆರವೇರಿಸಲಾಯಿತು.
ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಮುಂಜಾನೆಯವರೆವಿಗೂ ದೇವಾಲಯದ ಬಾಗಿಲು ತೆರದಿದ್ದರಿಂದಾಗಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಶ್ರೀಕಂಠೇಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾಗಿ ಭಾವಪರವಶರಾದರು.
ಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯದ ಒಳಾವರಣ, ಹೊರ ಆವರಣದ ಸುತ್ತ ಮುತ್ತ ವಿಶೇಷವಾದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಾಲಂಕಾರದಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು.
ದೇವಾಲಯದ ಮುಂಭಾಗದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಜಾಗರಣೆ ಪ್ರಯುಕ್ತ ಸರ್ಕಾರದ ವತಿಯಿಂದ ಶಿವರಾತ್ರಿ ಸಂಗೀತ ಜಾಗರಣೆ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಚಾಲನೆ ನೀಡಿದರು. ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್, ಸರಿಗಮಪ ಖ್ಯಾತಿಯ ರವೀಂದ್ರ, ವಿನೋದ್, ವಿಹಾನ್ ಆರ್ಯ ತಂಡದವತಿಯಿಂದ ನಡೆಸಿಕೊಟ್ಟ ಗಾಯನ, ಶಿವನಾಮಸ್ಮರಣೆಯ ಭಕ್ತಿಗೀತೆಗಳು ಭಕ್ತರ ಮನಗೆದ್ದವು. ಅಲ್ಲದೆ ಭರತನಾಟ್ಯ, ಕನ್ನಡ ಕೋಕಿಲೆ ತಂಡದ ಉಮಾ ರವರು ನಡೆಸಿಕೊಟ್ಟ ಜಾನಪದ ಗೀತೆ, ಸಂಗೀತ ಗೌಡರವರ ಗಾಯನ, ಪದ್ಮ ಹೇಮಂತ್ ನಡೆಸಿಕೊಟ್ಟ ನೃತ್ಯ ರೂಪಕ, ಮತ್ತು ವಾಸು ದೀಕ್ಷಿತ್, ಉದಯ್ ಅಂಕೋಲಾ, ಸುರೇಖಾ, ರಮ್ಯ ರವರು ನಡೆಸಿಕೊಟ್ಟ ಸಂಗೀತ ಸಂಜೆ ಕಾರ್ಉಕ್ರಮಗಳು ನೋಡುಗರ ಕಣ್ಮನ ಸೆರಳೆದವು. ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯದ ದಾಸೋಹಭವನದಲ್ಲಿ ಬೆಳಿಗ್ಗೆಯಿಂದ ರಾತ್ರಿ 11 ಗಂಟೆಯವರೆಗೂ ಉಪಹಾರ, ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅಲ್ಲದೆ ಸೇವಾರ್ಥದಾರರು ಕೇಸರಿ ಬಾತ್, ಖಾರಾ ಬಾತ್ ಪ್ರಸಾದ ವಿನಿಯೋಗ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ಪೋಲೀಸರು ಬಿಗಿ ಪೋಲೀಸ್ ಬಂಧೋಬಸ್ತ್‍ಅನ್ನು ನಿಯೋಜಿಸಲಾಗಿತ್ತು. ದೇವಾಲಯಕ್ಕೆ 100 ರೂ ವಿಶೇಷ ದರ್ಶನದ ಟಿಕೇಟ್‍ನಿಂದಲೇ ಸುಮಾರು ಲಕ್ಷಾಂತರ ರೂ ಆದಾಯ ಬಂದಿದೆ ಎಂದು ದೇವಾಲಯದ ಇಓ ಜಗದೀಶ್ ಪತ್ರಿಕೆಗೆ ಮಾಹಿತಿ ನೀಡಿದರು.
ಮಹಾಶಿವರಾತ್ರಿ ಅಂಗವಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ದರ್ಶನ್‍ಧ್ರುವನಾರಾಯಣ್, ಕಾಂಗ್ರೇಸ್ ಮುಖಂಡರಾದ ಸುನೀಲ್ ಬೋಸ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ದೇವಾಲಯಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದರು.
ತಾಲೂಕಿನ ದೇವಿರಮ್ಮನಹಳ್ಳಿಯ ಶ್ರೀ ಶರಣ ಸಂಘಮ ಮಠದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ 108 ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸಿ ಲಿಂಗಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ತಾಲೂಕಿನ ಚಿಕ್ಕಯ್ಯನಛತ್ರದ ಪ್ರಸನ್ನ ನಂಜುಂಡೇಶ್ವರ ದೇವಾಲಯ, ಕಾಶೀ ವಿಶ್ವನಾಥನ ಸನ್ನಿಧಿ, ಶಂಕರಮಠ, ಮಲ್ಲನಮೂಲೆ ಮಠ, ದೇವನೂರು ಮಠ, ಸುತ್ತೂರಿನ ಮಠಗಳಲ್ಲೂ ಕೂಡ ಶಿವರಾತ್ರಿ ಹಬ್ಬದ ಅಂಗವಾಗಿ ಜಾಗರಣೆ ಮತ್ತು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು.
ನಗರದ ಕಾಶಿ ವಿಶ್ವನಾಥ ದೇವಾಲಯ, ತಾಲೂಕಿನ ಸುತ್ತೂರು ಮಠದಲ್ಲೂ ಕೂಡ ಶಿವರಾತ್ರಿ ಜಾಗರಣೆಯ ಅಂಗವಾಗಿ ವಿಶೇಷ ಪೂಜೆ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕøತಿಕ ಕಾರ್ಯಕ್ರಮ ನಡೆದವು. ದಕ್ಷಿಣಕಾಶಿ ನಂಜನಗೂಡಿನ ಎಲ್ಲಾ ಶಿವ ದೇವಾಲಯಗಳಲ್ಲೂ ಕೂಡ ಭಕ್ತರು ದರ್ಶನ ಪಡೆಯುವ ಮೂಲಕ ಶಿವ ನಾಮಸ್ಮರಣೆಯಲ್ಲಿನಿರತರಾಗಿದ್ದರು.