ಶಿವರಾತ್ರಿ ಪ್ರಯುಕ್ತ ತಾಲ್ಲೂಕಿನಾದ್ಯಂತ ವಿಶೇಷ ಪೂಜೆ ಸಲ್ಲಿಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.09: ತಾಲ್ಲೂಕಿನಾದ್ಯಂತ ವಿವಿಧ ಗ್ರಾಮಗಳ ಶಿವನ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷಪೂಜೆ ಪುನಸ್ಕಾರಗಳು ಸಡಗರ ಸಂಭ್ರಮದಿಂದ ನಡೆದವು.
ಮುಂಜಾನೆಯಿಂದಲೇ ಎಲ್ಲಾ ದೇವಾಲಯಗಳನ್ನು ತಳಿರುತೋರಣ, ರಂಗವಲ್ಲಿ, ಹೂವಿನ ಅಲಂಕಾರ ಮುಂತಾದವುಗಳಿಂದ ಸಿಂಗರಿಸಲಾಗಿತ್ತು, ಭಕ್ತರು ಬೆಳಿಗ್ಗೆಯಿಂದ ಸಂಜೆಯವರೆಗೂ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷಪೂಜೆ ಸಲ್ಲಿಸುತ್ತಿದ್ದರು. ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಾಲಯದಲ್ಲಿ ದೇವಾಲಯದ ಆವರಣದಲ್ಲಿ ಸ್ಥಾಪಿಸಿದ್ದ ಲಿಂಗಕ್ಕೆ ಭಕ್ತರಿಂದ ಅಭಿಷೇಕ, ರುದ್ರಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಡೆದವು. ಹೊಸಹೊಳಲಿನ ಕೋಟೆ ಭೈರವೇಶ್ವರ, ಹರಿಹರಪುರದ ಹರಿಹರೇಶ್ವರದೇವಾಲಯ, ಸಿಂಧಘಟ್ಟದ ಸಂಗಮೇಶ್ವರ ದೇವಾಲಯ, ಮೋದೂರಿನ ರಾಮಲಿಂಗೇಶ್ವರ ದೇವಾಲಯ, ಬೂಕನಕೆರೆಯ ಈಶ್ವರ ದೇವಾಲಯ, ದೊಡ್ಡಗಾಡಿಗನಹಳ್ಳಿಯ ಜೋಡಿಲಿಂಗೇಶ್ವರ, ಅಟ್ಟುಪ್ಪೆಯ ಮಲ್ಲೇಶ್ವರ, ಗವಿಮಠದ ಸಿದ್ಧಲಿಂಗೇಶ್ವರ, ಮರುವನನಹಳ್ಳಿಯ ಬಸವೇಶ್ವರ ದೇವಾಲಯ, ಮರಡಿಲಿಂಗೇಶ್ವರ, ಗೋವಿಂದನಹಳ್ಳಿ ಪಂಚಲಿಂಗೇಶ್ವರ, ಸಾಸಲು ಶಂಭುಲಿಂಗೇಶ್ವರ, ತ್ರಿವೇಣಿ ಸಂಗಮದ ಸಂಗಮೇಶ್ವರ, ಅಗ್ರಹಾರಬಾಚಹಳ್ಳಿ ಹುಣಸೇಶ್ವರ ದೇವಾಲಯ, ಜೈನ್ನಹಳ್ಳಿ ವೀರಭದ್ರೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಎಲ್ಲಾ ಶಿವಾಲಯಗಳಲ್ಲಿಯೂ ವಿಶೇಷ ಪೂಜೆಗಳು ನಡೆದವು.
ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಏರಿಯ ಮೇಲೆ ಬಸವೇಶ್ವರಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು. ತಾಲ್ಲೂಕಿನ ಶೀಳನೆರೆ ಹೋಬಳಿಯ ರಾಯಸಮುದ್ರದ ಶ್ರೀ ನಾರಾಯಣದುರ್ಗದಲ್ಲಿ ನೆಲೆಸಿರುವ ಕಲ್ಲೇಶ್ವರ ಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಬೆಳಗ್ಗಿನಿಂದಲೇ ಬೆಟ್ಟ ಹತ್ತುವ ಮೂಲಕ ಕಲ್ಲೇಶ್ವರಸ್ವಾಮಿಯ ದರ್ಶನ ಪಡೆದರು. ನೂತನವಾಗಿ ಆರಂಭವಾಗಿರುವ ಹರಿಹರಪುರದ ಹರಿಹರೇಶ್ವರ ದೇವಾಲಯದಲ್ಲಿ ನೂರಾರು ಶಿವಭಕ್ತರು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಎಲ್ಲಾ ಶಿವನ ದೇವಾಲಯಗಳ ಗರ್ಭಗುಡಿಗಳಲ್ಲಿ ಸ್ವಾಮಿಯ ವಿಗ್ರಹವನ್ನು ವಿವಿಧ ಹೂವು, ಬೆಣ್ಣೆ ಸೇರಿದಂತೆ ಹಲವು ರೀತಿಯಲ್ಲಿ ಅಲಂಕರಿಸಲಾಗಿತ್ತು. ಭಕ್ತರು ಶಿವನಿಗೆ ಬಿಲ್ವಪತ್ರೆ ಅರ್ಪಿಸಿ ಪೂಜೆಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ನಿವೇದಿಸಿಕೊಂಡು ಭಕ್ತಿಭಾವದಿಂದ ಪಾಲ್ಗೊಂಡಿದ್ದರು.
ಹಲವು ದೇವಾಲಯಗಳಲ್ಲಿ ಹರಿಕಥೆ, ಭಜನೆ, ದೇವರ ಕೀರ್ತನೆಗಳನ್ನು ಏರ್ಪಡಿಸಲಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಭಕ್ತರು ಈಶ್ವರ ದೇವಾಲಯಗಳಿಗೆ ಭೇಟಿ ನೀಡಲು ಸಂಜೆಯಿಂದಲೇ ಆಗಮಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿದ್ದರು. ದೇವಾಲಯಗಳಿಗೆ ವಿವಿಧ ಬಣ್ಣಗಳಿಂದ ಕೂಡಿದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.