ಸರ್ವೇ ಇಲಾಖೆ ಜಂಟಿ ನಿರ್ದೇಶಕ ಗೋಪಾಲಯ್ಯಗೆ ಸನ್ಮಾನ
ಕೋಲಾರ,ಮಾ,೯- ಭೂದಾಖಲೆಗಳ ಇಲಾಖೆ ಉಪನಿರ್ದೇಶಕರ ಹುದ್ದೆಯಿಂದ ಭೂದಾಖಲೆಗಳ ಇಲಾಖೆ ಜಂಟಿ ನಿರ್ದೇಶಕರ ಹುದ್ದೆಗೆ ಬಡ್ತಿ ಪಡೆದು ಅಧಿಕಾರ ಸ್ವೀಕರಿಸಿದ ಇ.ಗೋಪಾಲಯ್ಯರನ್ನು ಕೋಲಾರ ಜಿಲ್ಲಾ ಭೂಮಾಪಕರ ಸಂಘ ಹಾಗೂ ಕರ್ನಾಟಕ ರಾಜ್ಯ ಭೂ ಮಾಪನ ಇಲಾಖೆ ಕಾರ್ಯ ನಿರ್ವಾಹಕ ನೌಕರರ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ರಾಜ್ಯ ಭೂಮಾಪಕರ ಸಂಘದ ರಾಜ್ಯಾಧ್ಯಕ್ಷ ಶ್ರೀಕಂಠ ಮಾತನಾಡಿ, ಸರ್ವೇ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ರಾಜ್ಯಾದ್ಯಂತ ನೌಕರರು ಅತ್ಯಂತ ಒತ್ತಡದಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ, ಈ ನೌಕರರ ಹಿತ ರಕ್ಷಣೆ ಮಾಡುವಲ್ಲಿ ಸದಾ ಸ್ಪಂದಿಸಿ ಕೆಲಸ ಮಾಡಿರುವ ಗೋಪಾಲಯ್ಯ ಅವರು ಜಂಟಿ ನಿರ್ದೇಶಕರಾಗಿರುವುದು ಹೆಮ್ಮೆಯ ವಿಷಯ ಎಂದರು.
ಜಿಲ್ಲಾ ನೌಕರರ ಸಂಘ ಹಾಗೂ ಸರ್ವೇ ಇಲಾಖೆ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಗೋಪಾಲಯ್ಯ ಅವರು ಈ ಹಿಂದೆ ಕೋಲಾರದಲ್ಲೂ ಸರ್ವೇ ಇಲಾಖೆ ಉಪನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿ ಉತ್ತಮ ಹೆಸರು ಗಳಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ನೌಕರರಿಗಿರುವ ಒತ್ತಡದ ಅರಿವು ಜಂಟಿ ನಿರ್ದೇಶಕರಿಗೂ ಇದೆ ಎಂದ ಅವರು, ಸದಾ ಇಲಾಖಾ ನೌಕರ ಸ್ನೇಹಿಯಾಗಿ ಕೆಲಸ ಮಾಡುವ ಗೋಪಾಲಯ್ಯ ಅವರಿಗೆ ಇನ್ನೂ ಉತ್ತಮ ಅವಕಾಶಗಳು ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಭೂ ಮಾಪನ ಇಲಾಖೆ ಕಾರ್ಯ ನಿರ್ವಾಹಕ ನೌಕರರ ಸಂಘದ ಶಿವರುದ್ರಯ್ಯ, ರಂಗಸ್ವಾಮಿ, ಚೇತನ್, ನಾಗರಾಜ್ ಮತ್ತಿತರರಿದ್ದರು.