ಮಹಿಳೆಯರಿಗೆ ಅವಕಾಶಗಳಿಂದ ಹೆಚ್ಚಿನ ಸಾಧನೆ ಸಾಧ್ಯ
ಕಲಬುರಗಿ:ಮಾ.8: ಸಮಾಜ ಮಹಿಳೆಯರ ಬಗ್ಗೆ ಸಹಾನುಭೂತಿ ತೋರಿದರೆ ಸಾಲದು. ಅವಳಿಗೆ ಅವಕಾಶಗಳನ್ನು ನೀಡಿ, ಮಹಿಳಾ ಸಬಲೀಕರಣದ ನೈಜ ಅನುಷ್ಠಾನವಾಗಬೇಕು. ಮಹಿಳೆಯರು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡರೆ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದೆ ಎಂದು ಯುವ ಚಿಂತಕಿ ಪ್ರಿಯಾಂಕಾ ದೋಟಕೊಳ್ಳ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಮಹಿಳೆಯು ತುಂಬಾ ತಾಳ್ಮೆಶಕ್ತಿಯನ್ನು ಹೊಂದಿದ್ದಾಳೆ. ಅಚಲ ಛಲಗಾರಿಕೆ ಇದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮರ್ಯಾದೆಗೇಡು ಹತ್ಯೆ, ದೇವರ ಹೆಸರಿನಲ್ಲಿನ ಹರಕೆಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಮಹಿಳೆಯರು ಮೌಢ್ಯತೆಯಿಂದ ಸಂಪೂರ್ಣವಾಗಿ ಹೊರಬಂದು ವೈಚಾರಿಕತೆ ಬೆಳೆಸಿಕೊಳ್ಳಬೇಕಾಗಿದೆ. ಮಹಿಳಾ ಸಮಾನತೆಗೆ ಬಸವಾದಿ ಶರಣರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ನೀಲೊಪರ್ ಶೇಖ್, ಶೃತಿ ಚವ್ಹಾಣ, ಲಕ್ಷ್ಮೀ ಸುತಾರ, ಪ್ರಿಯಾಂಕಾ ಗಾಣೂರ, ಶ್ವೇತಾ ಠಾಕೂರ, ಶಾರದಾ ಕಲೋಜಿ, ಸೌಭಾಗ್ಯ ಸುತಾರ, ಬೀರಪ್ಪ ಘೋಡಕೆ ಸೇರಿದಂತೆ ಮತ್ತಿತತರು ಪಾಲ್ಗೊಂಡಿದ್ದರು.