ಹಂಪಿ ಸೇರಿದಂತೆ ವಿಜಯನಗರದಾದ್ಯಂತ ಶಿವರಾತ್ರಿ ಸಂಭ್ರಮ
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ8: ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ಪೌರಾಣಿಕ ಪುಣ್ಯಕ್ಷೇತ್ರ  ಹಂಪಿ ವಿರೂಪಾಕ್ಷೇಶ್ವರ ಸೇರಿದಂತೆ ಶಿವಾಲಯಗಳಲ್ಲಿ ಮಹಾಶಿವರಾತ್ರಿ ಸಂಭ್ರಮದ ಹಿನ್ನೆಲೆಯಲ್ಲಿ ಭಕ್ತಸಾಗರವೇ ಶಿವಾಲಯಗಳತ್ತ ಮುಖ ಮಾಡಿದೆ. .
ಬೆಳಿಗ್ಗೆಯಿಂದಲೇ ಹಂಪಿ ವಿರೂಪಾಕ್ಷೇಶ್ವರಸ್ವಾಮಿಗೆ ತುಂಗಭದ್ರಾ ನದಿಯಲ್ಲಿ ಸ್ನಾನ ಹಾಗೂ ಸಂದ್ಯಾವಂದನೆಗಳನ್ನು ಪೂರೈಸಿದ ಭಕ್ತರು ನಾಲ್ಕಯಾಮಗಳಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಸರದಿಸಾಲುಗಳಲ್ಲಿ ನಿಂತು ಪೂಜಾಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ವಿರೂಪಾಕ್ಷೇಶ್ವರ ಸ್ವಾಮಿಗೆ ಮಹಾಶಿವರಾತ್ರಿ ಪ್ರಯುಕ್ತ ಇಂದು ಬೆಳಿಗ್ಗೆ, ಮಧ್ಯಾಹ್ನ ಸಾಯಂಕಾಲ ಹಾಗೂ ರಾತ್ರಿಯೂ ವಿಶೇಷಪೂಜೆ ಜರುಗಲಿದ್ದು ರಾತ್ರಿ ಏಕಾದಶ ರುದ್ರಾಭಿಷೇಕವೂ ವಿಶೇಷವಾಗಿ ಜರುಗಲಿದೆ. ಮಹಾಶಿವರಾತ್ರಿ ಪ್ರಯುಕ್ತ ಸುವರ್ಣಖಚಿತ ಮುಕುಟಧರಿಸಿ ಖುದ್ಧು ವಿರೂಪಾಕ್ಷೇಶ್ವರ ದಿದ್ಯಾರಣ್ಯ ಪೀಠದ ವಿದ್ಯಾರಣ್ಯಭಾರತಿ ಶ್ರೀಗಳು ನಾಲ್ಕ ಆಯಾಮಗಳ ಪೂಜೆಗೆ ಚಾಲನೆ ನೀಡಲಿದ್ದು ರುದ್ರಾಭಿಷೇಕದೊಂದಿಗೆ ಚಾಲನೆ ನೀಡಿದರು. ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ನೆರೆಯ ಆಂದ್ರಪ್ರದೇಶ ತೆಲಂಗಾಣಗಳಿಂದಲೂ ಭಕ್ತಸಾಗರ ಸಾಗರೋಪಾದಿಯಾಗಿ ಹರಿದುಬರುವ ಮೂಲಕ ಮಹಾಶಿವರಾತ್ರಿಯ ಪೂಜೆ ಹಾಗೂ ಕ್ಷೇತ್ರಾಧಿಪತಿ ವಿರೂಪಾಕ್ಷನ ದರ್ಶನ ಪಡೆದರು ಅಲ್ಲದೆ ನೆರೆಯ ಭಾಗಗಳಿಂದ ಭಕ್ತರು ಸ್ವಾಮಿಯ ದರ್ಶನ ಪಡೆಯುತ್ತಿದ್ದರು.
ಇನ್ನು ಆನೆಗುಂದಿಯ ಚಿಂತಾಮಣಿ ಮಠದಲ್ಲಿ ಸಾಕ್ಷಾತ್ ಕಾಶೀ ವಿಶ್ವೇಶ್ವರನೇ ನೆಲೆಸಿದ್ದಾನೆ ಎನ್ನುವ ಪ್ರತೀತಿಯಂತೆ ಇಂದು ಬೆಳಿಗಿನಿಂದಲೇ ಶ್ರೀ ಶಿವಾನಂದ ಭಾರತೀ ಮಹಾಸ್ವಾಮಿಗಳು ಮಹಾಶಿವರಾತ್ರಿ ಪ್ರಯಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರೆವೇರಿಸಿದರು. 
ಹೊಸಪೇಟೆಯಲ್ಲಿಯೂ ಮಹಾಶಿವರಾತ್ರಿ ಸಂಭ್ರಮ.
ಹೊಸಪೇಟೆಯಲ್ಲಿಯೂ ಮಹಾಶಿವರಾತ್ರಿ ಸಂಭ್ರಮ ಕಾಣತೊಡಗಿದ್ದು ನಗರದ ಶಿವಾಲಯಗಳು ಭಕ್ತಸಾಗರದಿಂದ ತುಂಬಿತುಳಕಿತು. ಜಂಬೂನಾಥೇಶ್ವರ, ನಗರೇಶ್ವರ, ಮಾರ್ಕಂಡೇಶ್ವರ, ನೀಲಕಂಠೇಶ್ವರ, ಓಂಕಾರೇಶ್ವರ, ಕಲ್ಮಟೇಶ್ವರ ಪೇಟೆ ಬಸವೇಶ್ವರ, ಮೇನ್ ಬಜಾರದಲ್ಲಿರುವ ಈಶ್ವರ ದೇವಸ್ಥಾನಗಳು ಸೇರಿದಂತೆ ಶಿವಾಲಯಗಳಲ್ಲಿ ಭಕ್ತರು ಸಾಲುಗಟ್ಟಿ ಪೂಜೆಸಲ್ಲಿಸುವ ಮೂಲಕ ಮಹಾಶಿವರಾತ್ರಿ ಪೂಜೆಯಲ್ಲಿ ಪಾಲ್ಗೊಂಡಿರುವುದು ಕಂಡು ಬಂತು.