ಮತಾಂತರಿಗಳಿಂದ ಮಾನವೀಯತೆಗೆ ಕುತ್ತು: ಬಸವನಗೌಡ್ರು
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ), ಮಾ.08: ಧರ್ಮ ಜಾಗೃತಿಗಿಂತ ವಿಸ್ತರಣೆಗೆ ಉತ್ಸುಕರಾಗಿರುವ ಮತಾಂತರಿಗಳಿಂದ ಭವಿಷ್ಯದಲ್ಲಿ ಮಾನವೀಯತೆಗೆ ಧಕ್ಕೆಯಾಗಲಿದೆ. ಆದರೆ, ವಸುದೈವ ಕುಟುಂಬಕಂ ತತ್ವದಲ್ಲಿ ನಂಬಿಕೆಯಿರುವ ಅದಕ್ಕೆ ತದ್ವಿರುದ್ಧವಾಗಿದ್ದು, ವಿಶ್ವ ಶಾಂತಿಯನ್ನು ಬಯಸುವ ಏಕೈಕ ಧರ್ಮ ಹಿಂದುತ್ವ ಎಂದು ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ಶಾಲೆಯ ಕಾರ್ಯದರ್ಶಿ ಬಸವನಗೌಡ್ರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೊಸಪೇಟೆ ಘಟಕದಿಂದ ನಗರದ ಹಂಪಿ ರಸ್ತೆಯಲ್ಲಿರುವ `ನೆಲೆ’ಸಂಸ್ಥೆಯಲ್ಲಿ ಸಂಜೆ ಏರ್ಪಡಿಸಿದ್ದ ಪ.ಪೂ.ಶ್ರೀ ಗುರೂಜಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ, ವಿಶ್ವದಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಯಾ ಸಮುದಾಯಗಳ ಬೆಳವಣಿಗೆಗಾಗಿ ಜನರನ್ನು ಮತಾಂತರಿಸುವ ಕಾರ್ಯ ಎಗ್ಗಿಲ್ಲದೇ ಸಾಗಿದೆ. ಜನರನ್ನು ಮತಾಂತರಿಸಲು ಅಧರ್ಮದ ಮಾರ್ಗಗಳನ್ನು ತುಳಿಯುತ್ತಿದ್ದಾರೆ. ಈ ಬಗ್ಗೆ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು ಎಂದರು.
ಕನಸಿನ ಭಾರತದಲ್ಲಿ ಪ್ರಾಂತೀಯ ಸಂಸ್ಥಾನಗಳನ್ನು ಒಗ್ಗೂಡಿಸುವಿಕೆಯಲ್ಲಿ ಶ್ರೀ ಗುರೂಜಿ ಅವರ ಪಾತ್ರವೂ ಮಹತ್ವದ್ದಾಗಿದೆ. 35 ವರ್ಷಗಳ ಕಾಲ ಸಂಘದ ನೇತೃತ್ವ ವಹಿಸಿಕೊಂಡಿದ್ದ ಪ.ಪೂ.ಗುರೂಜಿ ಅವರು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರೊಂದಿಗೆ ಒಕ್ಕೂಟ ಭಾರತ ನಿರ್ಮಾಣಕ್ಕಾಗಿ ಹೆಜ್ಜೆ ಹಾಕಿದ್ದಾರೆ. ಭಾರತ ಸ್ವಾತಂತ್ರ್ಯದ ಬಳಿಕ ಕಾಶ್ಮೀರದ ಮೇಲೆ ಪಾಕ್ ನಡೆಸಿದ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಸಂಘದ ಸ್ವಯಂ ಸೇವಕರೂ ಸೇನಾನಿಗಳಂತೆ ಹೋರಾಡಿದ್ದಾರೆ. ಹೀಗಾಗಿ ಭಾರತ ಜನ್ಮ ಮತ್ತು ಏಳ್ಗೆಯಲ್ಲಿ ಆರ್‍ಎಸ್‍ಎಸ್ ಕೊಡುಗೆಯನ್ನು ಅಲ್ಲಗೆಳೆಯುವಂತಿಲ್ಲ ಎಂದು ಹೇಳಿದರು.
ಹಿರಿಯ ಪ್ರಚಾರಕ ರಾಜಶೇಖರ್ ಜೀ, ಜಿಲ್ಲಾ ಸೇವಾ ಪ್ರಮುಖ ಶ್ರೀನಿವಾಸ ಜೀ, ನಗರ ಕಾರ್ಯವಾರು ಸುನೀಲ್ ಕುಮಾರ್ ಸೇರಿದಂತೆ ನೂರಾರು ಸ್ವಯಂ ಸೇವಕರು ಪಾಲ್ಗೊಂಡಿದ್ದರು.
One attachment • Scanned by Gmail