ಕಬ್ಬೂರು ಪ್ರೌಢಶಾಲೆಯಲ್ಲಿ ಶಾರದಾ ಪೂಜೆ – ನೂತನ ಕೊಠಡಿ ಉದ್ಘಾಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೮; ಕಬ್ಬೂರು ಸರ್ಕಾರಿ ಪ್ರೌಢಶಾಲೆಯಲ್ಲಿ  ಶಾರದಾ ಪೂಜೆ, ಮುಖ್ಯ ಶಿಕ್ಷಕರ ಕೊಠಡಿ ಉದ್ಘಾಟನೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಡಿ. ಚಂದ್ರಣ್ಣ, ಅತ್ತಿಗೆರೆ ಗ್ರಾಮ ಪಂಚಾಯತ್ ಸದಸ್ಯರಾದ ರಾಜಣ್ಣ ಹಾಗೂ ಕಲ್ಲೇಶಣ್ಣ ಮುಖ್ಯ ಶಿಕ್ಷಕರ ನೂತನ ಕೊಠಡಿಯನ್ನು ಉದ್ಘಾಟಿಸಿ, ಮಕ್ಕಳಿಗೆ ಹಿತನುಡಿದರು. ನಂತರ ಶಾಲಾವತಿಯಿಂದ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕ ಎಂ.ಎಸ್. ಸುನೀಲ್ ಕುಮಾರ್ ಹಾಗೂ ಅತಿಥಿಗಳು ಸಾಂಕೇತಿಕವಾಗಿ ಪರೀಕ್ಷಾ ಪ್ರವೇಶ ಪತ್ರ ವಿತರಿಸಿದರು. ನಂತರ ಬೀಳ್ಕೊಡುಗೆ ಪಡೆದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್  ಪೌಡರ್ ಪೌಷ್ಟಿಕ ಆಹಾರವನ್ನು  ಮಕ್ಕಳಿಗೆ ಗಣ್ಯರು ವಿತರಿಸಿ, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೇ ವೇಳೆ ಈ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಕಳೆದ ಸಾಲಿನ ಹಿರಿಯ ವಿದ್ಯಾರ್ಥಿಗಳು ಸೇರಿ  ಶಾಲೆಗೆ  ಮೂರು ಟೇಬಲ್ ಗಳನ್ನು ಕೊಡುಗೆಯಾಗಿ ನೀಡಿದರು. ಅತ್ತಿಗೆರೆ ಗ್ರಾ.ಪಂ. ಸದಸ್ಯ ರಾಜಣ್ಣ ಅವರು ಅಂದಾಜು 50 ಸಾವಿರ ವೆಚ್ಚದ ‘U’ ಆಕಾರದ ಮೇಜನ್ನು ಮುಖ್ಯ ಶಿಕ್ಷಕರ ಕೊಠಡಿಗೆ ಮಾಡಿಸಿಕೊಡುವುದಾಗಿ ವಾಗ್ದಾನ ಮಾಡಿದರು. ಎಸ್ ಡಿಎಂಸಿ ಅಧ್ಯಕ್ಷ ಡಿ. ಚಂದ್ರಣ್ಣ ಅವರು ಶಾಲಾ ಕಟ್ಟಡ ದುರಸ್ತಿಗೆ 10 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಈ ಸಂದರ್ಭದಲ್ಲಿ ವಾಗ್ದಾನ ಮಾಡಿದರು.ವೇದಿಕೆ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಎಂ.ಎಸ್. ಸುನೀಲ್ ಕುಮಾರ್ ವಹಿಸಿ ಮಾತನಾಡಿದರು. ಸಮಾಜ ವಿಜ್ಞಾನ ಶಿಕ್ಷಕಿ ಪುಷ್ಪ ಮಜ್ಜಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.ಆರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಇಂಗ್ಲೀಷ್ ಭಾಷಾ ಶಿಕ್ಷಕ ಎಂ.ಜೆ. ಮಂಜುನಾಥ್ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಕೆ.ಎಂ. ಯೋಗೇಶ್ ವಂದಿಸಿದರು. ಕನ್ನಡ ಭಾಷಾ ಶಿಕ್ಷಕಿ ಜಿ.ಆರ್. ಮಮತಾ ನಿರೂಪಿಸಿದರು.