ಡೆವಲಪ್‍ಮೆಂಟ್ ಆಫ್ ಟ್ರಾವೆಲ್ಲರ್ ನೂಕ್ಸ್‍ಗೆ ಚಾಲನೆವರ್ಚುವಲ್ ನಲ್ಲಿ ಹಂಪಿ ಯೋಜನೆಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ), ಮಾ.08: ಭಾರತ ಸರ್ಕಾರ, ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಸ್ವದೇಶ ದರ್ಶನ್-2.0 ಯೋಜನೆಯಡಿ  ವಿಶ್ವವಿಖ್ಯಾತ ಹಂಪಿಯ ವಿವಿಧ ಪರಿಸರದಲ್ಲಿ ಕೈಗೊಂಡಿರುವ ಡೆವಲಪಮೆಂಟ್ ಆಫ್ ಟ್ರಾವೆಲ್ಲೆರ್ ನೂಕ್ಸ್‍ಗೆ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಲ್ಲಿ ವರ್ಚುವಲ್(ನೇರ ಪ್ರಸಾರ)ದ ಮೂಲಕ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದರು.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಏರ್ಪಡಿಸಿದ್ದ ನೇರ ಪ್ರಸಾರ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ವೈ.ದೇವೇಂದ್ರಪ್ಪ, ಹಂಪಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮೆಲರ ಆದ್ಯ ಕರ್ತವ್ಯವಾಗಿದೆ. ಕೇಂದ್ರ ಸರ್ಕಾರ ಸ್ವದೇಶ ದರ್ಶನ್-2.0 ವ್ಯಾಪ್ತಿಗೆ ಹಂಪಿಯನ್ನು ಒಳಪಡಿಸುವಂತೆ ಸಾಕಷ್ಟು ಬಾರಿ ಒತ್ತಾಯಿಸಿದ್ದರಿಂದ ನನ್ನ ಹಾಗೂ ಜಿಲ್ಲಾಧಿಕಾರಿಯ ಪ್ರಯತ್ನದಿಂದಾಗಿ ಆಯ್ಕೆಯಾಗಿದೆ. ಈ ಯೋಜನೆಯಡಿ ಸದ್ಯ 70 ಕೋಟಿ ರೂ. ಮಂಜೂರಾಗಿದ್ದು, ಆ ಪೈಕಿ 30 ಕೋಟಿ ರೂ. ಮೊದಲ ಕಂತು ಬಿಡುಗಡೆಯಾಗಿದೆ. ಹೊಸಪೇಟೆಯಿಂದ ಬಳ್ಳಾರಿ ಮಾರ್ಗವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿಯ ಹಿಂದಿನ ಗುತ್ತಿಗೆಯನ್ನು ರದ್ದುಗೊಳಿಸಿದೆ. ರಸ್ತೆ ಪೂರ್ಣಗೊಳಿಸಲು 8,250 ಕೋಟಿ ರೂ. ಮೊತ್ತದಲ್ಲಿ ಮರು ಟೆಂಡರ್ ಕರೆಯಲಾಗುತ್ತಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಹಂಪಿ ಅಭಿವೃದ್ಧಿಗೆ ಅನುಕೂಲವಾಗುತ್ತಿದೆ. ಈಗಾಗಲೇ ಹಂಪಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲೆಗೆ ನಿಷ್ಠಾವಂತ ಅಧಿಕಾರಿಗಳು ಬಂದಿರುವುದರಿಂದ ಎಲ್ಲ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಪುರಾತತ್ವ ಇಲಾಖೆಯ ಒಪ್ಪಿಗೆಯ ಮೇರೆಗೆ, ಬೇರೆ ಯಾವುದೇ ಇಲಾಖೆಗೆ ತೊಂದರೆಯಾಗದಂತೆ 3 ವಿಧದ 20 ಟ್ರಾವೆ¯ರ್ ನೂಕ್ಸ್‍ಗಳಿಗೆ ಅನುಮೋದನೆ ಕೊಡಲಾಗಿದೆ. ಟಿಬಿ ಡ್ಯಾಂ ನಿಂದ ಆರಂಭಗೊಂಡು ಹಂಪಿ ಹಾಗೂ ಆನೆಗುಂದಿಯವರೆಗೆ ಟ್ರಾವೆ¯ರ್ ನೂಕ್ಸ್‍ಗಳನ್ನು ಸೃಷ್ಟಿಸಲು ತೀರ್ಮಾನಿಸಲಾಗಿದೆ. ದೇವಸ್ಥಾನ ಮತ್ತು ಪ್ರವಾಸಿ ತಾಣಗಳಲ್ಲಿ, ಭಕ್ತಾದಿಗಳು, ಪ್ರವಾಸಿಗರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಎಲ್ಲರಿಗೂ ಮೂಲಭೂತ ಸೌಕರ್ಯ ಒದಗಿಸಬೇಕಿದೆ. ಮಳೆ, ಬೆಳೆಯಿಲ್ಲದಿದ್ದರೂ, ಜನರ ಭಕ್ತಿಭಾವಕ್ಕೆ ಕೊರತೆಯಿಲ್ಲ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಸಹಾಯಕ ಆಯುಕ್ತ ಮೊಹಮ್ಮದ್ ಅಲಿ ಅಕ್ರಂ ಷಾ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ಎಸ್. ತಾಳಿಕೇರಿ, ತಹಸೀಲ್ದಾರ ಶೃತಿ ಎಂ.ಎಂ., ಹಂಪಿ ಗ್ರಾ.ಪಂ. ಅಧ್ಯಕ್ಷೆ ರಜಿನಿ ಷಣ್ಮುಖ ಗೌಡ, ಉಪಾಧ್ಯಕ್ಷರು, ಸದಸ್ಯರು, ಮಾರ್ಗದರ್ಶಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.