ಮಹಿಳೆಯರ ಹಾರ್ಮೋನ್ ಅಸಮತೋಲನದ ಸಮಯದಲ್ಲಿ ಸಹಾನುಭೂತಿಯ ವರ್ತನೆ ಅಗತ್ಯ   – ಡಾ.ಹೇಮಲತಾ
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ 8: : ಋತುಚಕ್ರ,  ಮುಟ್ಟು ನಿಲ್ಲುವ ಹಾಗೂ ನಂತರದ ಸಮಯದಲ್ಲಿ ಮಹಿಳೆಯರ ಹಾರ್ಮೋನ್ ಗಳ ಅಸಮತೋಲನದಿಂದ  ಮಾನಸಿಕ ಬದಲಾವಣೆಗಳು ಸಹಜ  ಆ ಸಮಯದಲ್ಲಿ ಪುರುಷರು ತಮ್ಮ ಸಂಗಾತಿಯೊಂದಿಗೆ ಸಹಾನುಭೂತಿಯಿಂದ ವರ್ತಿಸಿ ಆಕೆಗೆ ಅಸರೆಯಾಗಿ ನಿಲ್ಲುವುದು ಅತಿ ಅವಶ್ಯ ಎಂದು ಖ್ಯಾತ ವೈದ್ಯ ಡಾ.ಹೇಮಲತಾ ಅಭಿಪ್ರಾಯಪಟ್ಟರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪತಂಜಲಿಯೋಗ ಸಮಿತಿ, ಫ್ರೀಡಂ ಪಾರ್ಕ್ ಯೋಗ ಕೇಂದ್ರ ಸಂಯುಕ್ತವಾಗಿ ವಿಶೇಷವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಮಹಿಳೆಯ ಆರೋಗ್ಯ, ಪ್ರೌಢಾವಸ್ಥೆ, ಮುಟ್ಟಿನ ಸಮಯ, ಮುಟ್ಟು ನಿಂತ ಸಮಯ ಹಾಗೂ ನಂತರದ ದಿನಗಳಲ್ಲಿ ಹೆಣ್ಣಿನಲ್ಲಿ ಆಗುವ ದೈಹಿಕ ಮಾನಸಿಕ ಬದಲಾವಣೆಗಳ ಬಗ್ಗೆ ಯೋಗ ಸಾಧಕರೊಂದಿಗೆ ಸಂವಾದ ನಡೆಸಿದ  ಅವರು ಡಾ.ಹೇಮಲತಾ, ಡಾ.ಸುಮಂಗಲ, ಡಾ. ವನಜ ಹುಬ್ಳೀಕರ್ ಅವರುಗಳು ಒಕ್ಕೊರಲಿನ  ಅಭಿಪ್ರಾಯ ವ್ಯಕ್ತಪಡಿಸಿದರು ‌
ಈ ಸಂದರ್ಭದಲ್ಲಿ ಮಾತನಾಡಿದ  ಡಾ.ವನಜ ಹುಬ್ಳೀಕರ್ ಅವರು  ಋತುಸ್ರಾವ ಆರಂಭ, ಅಂತ್ಯ ಹಾಗೂ ಮುಟ್ಟಿನ ಸಮಯದಲ್ಲಿ ಮಹಿಳೆಯರ ಮಾನಸಿಕ  ಬದಲಾವಣೆ, ಖಿನ್ನತೆ, ಉದ್ವೇಗದ ಬಗ್ಗೆ  ಅರಿತು ಹೆಚ್ಚಿನ ಒತ್ತಡಕ್ಕೊಳಗಾಗದೆ ಸಂಯಮದಿಂದ ಇರುವುದನ್ನು ಕಲಿಯಬೇಕು, ಮುಟ್ಟಿನ ಸಮಯದಲ್ಲಿ ಬರುವ  ತಾತ್ಕಾಲಿಕ ನೋವುಗಳ  ಬಗ್ಗೆ ಆತಂಕ ಬೇಕಿಲ್ಲ, ಪ್ರೌಢಾವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ  ದೈಹಿಕ ಬೆಳವಣಿಗೆ, ಅಸಹಜವೆಂದು ಕಂಡು ಬಂದಾಗ ಮುಚ್ಚಿಟ್ಟುಕೊಳ್ಳದೇ ವೈದ್ಯರೊಂದಿಗೆ ಸಮಾಲೋಚಿಸಿ ಪರಿಹಾರ ಪಡೆಯಿರಿ, ಅದರಂತೆ ಮಕ್ಕಳಿಗೆ ವಿದ್ಯೆಯೊಂದಿಗೆ  ಸಂಸ್ಕಾರವನ್ನು ನೀಡುವುದು ಅತಿ ಅವಶ್ಯ ಎಂದರು.
 ಡಾ.ಹೇಮಲತಾ ಮಾತನಾಡಿ :: ಗರ್ಭಾವಸ್ಥೆಯಲ್ಲಿ  ಪೌಷ್ಠಿಕ ಆಹಾರ ಸೇವವಿಸಿ, ಹೆಣ್ಣು23 ರಿಂದ 28- ವರ್ಷದೊಳಗೆ ಗರ್ಭ ಧರಿಸಲು ಅತಿ ಉತ್ತಮ,  ಆ ಸಮಯದಲ್ಲಿ ಗರ್ಭಧರಿಸಿದರೆ ಆರೋಗ್ಯ ಪೂರ್ಣ ಮಗು ಪಡೆಯಲು ಸಾಧ್ಯ ಇಲ್ಲವಾದಲ್ಲಿ  ಅನುವಂಶಿಕ  ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು,   ಸಿನಿಮಾ ಹೀರೋಯಿನ್ ಗಳು ತಮ್ಮ  ಅಂಡಾಣುಗಳನ್ನು ಸಂಗ್ರಹಿಸಿ ಶೇಖರಿಸಿಟ್ಟು ನಲವತ್ತರ   ನಂತರ ಗರ್ಭ ಧರಿಸಲು ಬಳಸುತ್ತಾರೆ  ಅವರನ್ನು ಅನುಸರಿಸುವುದು ಬೇಡ, ಎಲ್ಲದಕ್ಕೂ ವಯಸ್ಸಿನ ಇತಿಮಿತಿಯಿದ್ದು ವಯಸ್ಸಿಗನುಗುಣವಾಗಿ ನಡೆದರೆ ಒಳಿತು  ಎಂದರು.
ಡಾ.ಸುಮಂಗಲ ಅವರು ಮಾತನಾಡಿ  ಮುಟ್ಟು ನಿಂತ ನಂತರ  ಹೃದಯಾಘಾತದ ಸಂಭವ ಪುರುಷರಿಗಿಂತ ಮಹಿಳೆಯರಿಗೆ ದುಪ್ಪಟ್ಟು ಇದೆ, ಆದ್ದರಿಂದ ಆರೋಗ್ಯಕ್ಕಾಗಿ ಯೋಗ, ವ್ಯಾಯಾಮ,ವಾಕಿಂಗ್ ಮಾಡಿ, ಒತ್ತಡಕ್ಕೊಳಗಾಗದೆ ಸದಾ ಖುಷಿ ಖುಷಿಯಾಗಿರುವುದನ್ನು ಕಲಿತು ಉತ್ತಮ ಜೀವನಶೈಲಿ ಅನುಸರಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಮಂಗಳಮ್ಮ , ನಗರಸಭೆ ಮಾಜಿ ಅಧ್ಯಕ್ಷೆ ಸುಂಕಮ್ಮ, ಹೊಸಪೇಟೆ ಟೈಮ್ಸ್ ದಿನ ಪತ್ರಿಕೆಯ ಸಂಪಾದಕಿ ರೇಖಾ ಪ್ರಕಾಶ್, ಫ್ರೀಡಂ ಪಾರ್ಕ್ ನ ಉಸ್ತುವಾರಿಗಳಾದ ಅನಂತ ಜೋಷಿ, ಶ್ರೀರಾಮ, ಚಂದ್ರಕಾ, ಸುಜಾತಾ, ಪ್ರಮೀಳಮ್ಮ  ಹಾಗೂ ಇತರರು ಇದ್ದರು.  ಇದೆ ಸಂದರ್ಭದಲ್ಲಿ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು. ಶೈಲಜ ಕಳಕಪ್ಪ  ಯೋಗ ತರಗತಿ ಹಾಗೂ ಕಾರ್ಯಕ್ರಮ ನಿರ್ವಹಣೆ ಮಾಡಿದ್ದರು.