ಬೈಗುಳ: ವೃತ್ತಿ ಸಂಬಂಧಿ ವರ್ಗವಿನ್ಯಾಸ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.08: ‘ತಮ್ಮ ಸಮುದಾಯದ ವೃತ್ತಿಗಿಂತ ಮತ್ತೊಂದು ಸಮುದಾಯದ ವೃತ್ತಿ ಕೀಳು ಎನ್ನುವ ಹಿನ್ನೆಲೆಯಲ್ಲಿಯೆ ಬೈಗುಳಗಳು ರಚನೆಯಾಗಿರುವುದನ್ನು ಕಾಣಬಹುದು’ ಎಂದು ಸಂಶೋಧನಾರ್ಥಿ ಚೌಡಪ್ಪ ಪಿ. ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರದ ಮಾತು 244ನೇ ಆನ್‍ಲೈನ್ ಕಾರ್ಯಕ್ರಮದಲ್ಲಿ ‘ಬೈಗುಳ: ವೃತ್ತಿ ಸಂಬಂಧಿ ವರ್ಗವಿನ್ಯಾಸ’ದ ಕುರಿತು ಅವರು ಮಾತನಾಡುತ್ತಿದ್ದರು. ಸಮಾಜದಲ್ಲಿ ಸಾಮಾಜಿಕವಾಗಿ ಕೆಳವರ್ಗಗಳೆಂದು ಗುರುತಿಸಿಕೊಂಡ ಸಮುದಾಯ ವೃತ್ತಿಗಳನ್ನು ಆಧರಿಸಿಯೇ ಬೈಗುಳಗಳು ರಚನೆಯಾಗಿರುವುದನ್ನು ಕಾಣಬಹುದು. ಉದಾಹರಣೆಗೆ ದನ ಕಾಯೋಕೆ ಹೋಗು, ಮಾದಿಗರ ಕುರಿತು ಮಾದಿಗ ನನ್ಮಗ, ಚಮ್ಮಾರರ ಕುರಿತು ಕೆರ ಹೊಲಿಯಾಕ ಹೋಗು ಮುಂತಾದವು. ಮುಂದುವರಿದು ಅವರು ವೃತ್ತಿ ಸಂಬಂಧಿತ ಬೈಗುಳಗಳು ಬಹುತೇಕವಾಗಿ ಗಂಡನ್ನು ಕೇಂದ್ರೀಕರಿಸಿ ಇರುವುದನ್ನೇ ಕಾಣಬಹುದಾಗಿದ್ದು ಹೆಣ್ಣಿಗೆ ಸಂಬಂಧಿಸಿದಂತೆ ಬೆರಳೆಣಿಕೆಯಲ್ಲಿರುವುದನ್ನು ಕಾಣಬಹುದು ಎಂದು ಉದಾಹರಣೆ ಸಹಿತ ವಿವರಿಸಿದರು.   
ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಪಿ. ಮಹಾದೇವಯ್ಯ ಅವರು ಹಾಗೂ ಸಂಶೋಧನಾ ವಿದ್ಯಾರ್ಥಿ ದಿನೇಶ್ ಎಸ್ ಅವರು ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಚೆಂದಸ್ವಾಮಿ, ಶಿಲ್ಪಾ ಹೆಚ್.ವಿ ಉಪಸ್ಥಿತರಿದ್ದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು.