ವಾಡಿ: ಸಂವಿಧಾನ ಜಾಗೃತಿ ಸಮಾರೋಪ 10 ರಂದು
ವಾಡಿ,ಮಾ.8: ಜಿಲ್ಲಾ ಮಟ್ಟದ ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಸಮಾರಂಭ ಇದೇ ಮಾರ್ಚ್ 10ರಂದು ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆಯಲಿದೆ.
ಈ ಕುರಿತು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಆದೇಶ ಹೊರಡಿಸಿದ್ದು, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ಎರಡು ಬಾರಿ ಭೇಟಿ ನೀಡಿದ ಐತಿಹಾಸಿಕ ವಿದ್ಯಮಾನಕ್ಕೆ ಗೌರವಸೂಚಕವಾಗಿ ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ಬೃಹತ್ ಸನಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯಮಟ್ಟದಲ್ಲಿ ಈ ಸಮಾರೋಪ ಸಮಾರಂಭ ಗಮನ ಸೆಳೆಯುವಂತೆ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸ್ತಬ್ಧ ಚಿತ್ರಗಳ ಮೆರವಣಿಗೆ, ಅಂಬೇಡ್ಕರ್ ಜೀವನ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ, ಉಪನ್ಯಾಸ ಕಾರ್ಯಕ್ರಮ, ಭೀಮ ಗೀತೆಗಳ ಗಾಯನ, ಕಿರುನಾಟಕ ಪ್ರದರ್ಶನ, ಜನಪದ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ಅಂದು ಹಮ್ಮಿಕೊಳ್ಳಲಾಗುತ್ತಿದೆ ಎಂದಿದ್ದಾರೆ.ಸಮಾರಂಭದ ಯಶಸ್ಸಿಗೆ ಪೂರಕವಾಗಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.