ಕಷ್ಟ ಪಟ್ಟಲ್ಲಿ ಮಾತ್ರ ಯಶಸ್ಸು ಸಾಧ್ಯ
ಔರಾದ್ : ಮಾ.8:ಅಸಾಧ್ಯವಾದುದನ್ನು ಸಾಧ್ಯವಾಗಿಸುವುದೇ ನಿಮ್ಮ ಧ್ಯೇಯವಾಗಬೇಕು. ಕಷ್ಟ ಪಟ್ಟಲ್ಲಿ ಮಾತ್ರ ಯಶಸ್ಸು ಸಿಗಲು ಸಾಧ್ಯ ಆದುದರಿಂದ ವಿದ್ಯಾರ್ಥಿಗಳು ಎಲ್ಲಾ ಕಷ್ಟವನ್ನು ಎದುರಿಸಬೇಕು ಎಂದು ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳಿ ಹೇಳಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಗುರುವಾರ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬದುಕು ಅಂದುಕೊಂಡಷ್ಟು ಸುಲಭವಲ್ಲ. ನಿಷ್ಠೆ, ಪ್ರಾಮಾಣಿಕತೆಯಿಂದ ಕಲಿಯಬೇಕು. ಕಷ್ಟಪಟ್ಟಲ್ಲಿ ಮಾತ್ರ ಫಲ ಸಿಗಲು ಸಾಧ್ಯ. ಸಾಧನೆ ಎಂಬುದು ಯಾರ ಸ್ವತ್ತಲ್ಲ. ಅದನ್ನು ಸಿದ್ಧಿಸಿಕೊಳ್ಳಲು ಬರುವ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಛಾತಿ ಬೆಳೆಸಿಕೊಳ್ಳಬೇಕು. ಆತ್ಮಸ್ಥೈರ್ಯ, ಅಚಲ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿ, ಪರೀಕ್ಷೆಯಲ್ಲಿ ಫೇಲ್ ಆಗುತ್ತೆನೆ, ನನಗೆ ಕಡಿಮೆ ಅಂಕ ಬಂದಿದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡುಕೊಳ್ಳುವುದು ಹೇಡಿಗಳ ಲಕ್ಷಣ. ಜೀವನದಲ್ಲಿ ಬಿದ್ದ ಜಾಗದಲ್ಲೆ ಎದ್ದು ಬರುವಂತಹ ಛಲ, ಧೈರ್ಯವನ್ನು ಇಂದಿನ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ಸೋಲು, ಗೆಲುವು ಜೀವನದ ಭಾಗಗಳು. ಸೋತಾಗ ಕುಗ್ಗುವುದು, ಗೆದ್ದಾಗ ಹಿಗ್ಗುವವರ ಕೈಯಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸೋಲನ್ನು ಸವಾಲಾಗಿ ಸ್ವಿ?ಕರಿಸಿ, ಛಲದಿಂದ ಗುರಿ ಮುಟ್ಟಲು ಶ್ರಮಿಸಿದರೆ ಯಶಸ್ಸು ತಾನೇ ಹುಡುಕಿಕೊಂಡು ಬರುತ್ತದೆ ಎಂದು ಕಿವಿಮಾತು ಹೇಳಿದರು.
ಶಾಲೆಯ ಪ್ರಾಂಶುಪಾಲ ಧೂಳಪ್ಪ ಮಳೆನೂರೆ ಅಧ್ಯಕ್ಷೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಯಾವುದು ಕಷ್ಟವಾಗುವುದಿಲ್ಲ, ಸಾಧನೆಯನ್ನು ಮಾಡೇ ಮಾಡುತ್ತೇನೆ ಎಂಬ ಹಠ, ಛಲ ಇರಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ನೀಲಗಂಗಾ ಚಿಟಮೇ, ಓಂಕಾರ ಹೊಸಳ್ಳಿ ಮಾತನಾಡಿದರು. ಶಿಕ್ಷಕರಾದ ಶೇಷರಾವ ಬಿರಾದಾರ್, ಸುದರ್ಶನ ಬಾಳುರಕರ್, ದೊಡ್ಡೇಶ ತಳವಾರ್, ಮೇರಿ ಅಗ್ನೇಶ್, ಶಿಲ್ಪಾ, ಜರೀನಾ ವಹಬ್, ಸುವರ್ಣ ಪಂಚಾಳ, ಅಂಬಿಕಾ, ರಾಜಕುಮಾರ ಮೇತ್ರೆ ಸೇರಿದಂತೆ ಅನೇಕರಿದ್ದರು. ಮಹಾದೇವ ಚಿಟಗೀರೆ ಸ್ವಾಗತಿಸಿದರು. ಬಸವಕುಮಾರ ಮುದಾಳೆ ನಿರೂಪಿಸಿದರು. ನಾಗನಾಥ ಸೂರಂಗೆ ವಂದಿಸಿದರು.