ಸಾಲಮನ್ನಾ ಮಾಡಲು ಆಗ್ರಹಿಸಿ ಪ್ರತಿಭಟನೆ
ಬ್ಯಾಡಗಿ,ಮಾ8: ತೆಲಂಗಾಣ ಮಾದರಿಯಂತೆ ಕರ್ನಾಟಕ ರಾಜ್ಯದಲ್ಲೂ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕ ಸಮಿತಿ, ಬ್ಯಾಡಗಿ ಮತ್ತು ಕಾಗಿನೆಲೆ ಹೋಬಳಿ ಘಟಕದ ಸಂಯುಕ್ತಾಶ್ರಯದಲ್ಲಿ ಕಾಗಿನೆಲೆಯಲ್ಲಿ ಪ್ರತಿಭಟನೆ ನಡೆಸಿ ಉಪತಹಶೀಲದಾರ ಎಸ್.ಎನ್.ಮಲ್ಲಾಡದ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮು ತಳವಾರ ಮಾತನಾಡಿ, ರಾಜ್ಯದಲ್ಲಿ ಸತತವಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಣಾಮವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಭೀಕರವಾದ ಬರಗಾಲದ ಪರಿಣಾಮ ರೈತರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಅನೇಕ ರೈತರು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಅಲ್ಲಲ್ಲಿ ಕಂಡು ಬಂದಿವೆ. ಬಹಳಷ್ಟು ರೈತರು ಸಾಲಬಾಧೆಯಿಂದ ಹೊರಬರಲು ಕೃಷಿ ಜಮೀನುಗಳನ್ನು ಮಾರಾಟ ಮಾಡ್ತಿದ್ದಾರೆ, ಗ್ರಾಮೀಣ ಭಾಗದ ಕಾರ್ಮಿಕರು ಉದ್ಯೋಗ ಅರಿಸಿಕೊಂಡು ವಲಸೆ ಹೋಗುತ್ತಿದ್ದಾರೆ ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರವಾದ ತೀರ್ಮಾನ ಕೈಗೊಂಡು ಜನತೆಗೆ ಉದ್ಯೋಗ ದೊರಕಿಸಿ ಕೊಡುವಂತೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಪಾಧ್ಯಕ್ಷೆ ಸುಮಾ ಪುರದ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾದ ಬೆಲೆ ನೀಡಬೇಕು. ಕೃಷಿಗೆ ಬಳಸಲಾಗುವ ಕೀಟನಾಶಕ, ರಸಗೊಬ್ಬರ, ಹನಿ ನೀರಾವರಿ ಪದ್ಧತಿ ಉಪಕರಣಗಳು ಮತ್ತು ಟ್ರ್ಯಾಕ್ಟರ್‍ಗಳ ಬಿಡಿಭಾಗಗಳಿಗೆ ಜಿಎಸ್‍ಟಿ ವಿಧಿಸುತ್ತಿರುವುದನ್ನು ರದ್ದುಪಡಿಸಬೇಕು. ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಕೊರೆಯಲಾಗಿದ್ದ ಕೊಳವೆ ಬಾವಿಗಳಲ್ಲಿ ನೀರು ಬತ್ತಿಹೋಗುತ್ತಲಿವೆ. ಜನ?ಜಾನುವಾರುಗಳಿಗೆ ಸರಿಯಾಗಿ ಕುಡಿಯುವ ನೀರು ಸಿಗದಂತೆ ಪರಸ್ಥಿತಿ ಉದ್ಭವಿಸುವ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರೇಕೆರೂರ ತಾಲೂಕಾಧ್ಯಕ್ಷ ವೀರೇಶ ಹಡಪದ, ಶಾಂತವೀರ್ ತಟ್ಟಿ, ರಾಮಣ್ಣ ಪೂಜಾರ, ಮಂಜುನಾಥ ಮೇಗಲಮನಿ, ಕರಬಸಪ್ಪ ಮೇಗಲಮನಿ, ಪ್ರಕಾಶ್ ಅಸುಂಡಿ, ರಾಜು ಪಾಟೀಲ, ಗುಡ್ಡಪ್ಪ ಕೋಣನವರ ಸೇರಿದಂತೆ ಇತರರಿದ್ದರು.