ಮುನಿರತ್ನ ಶಾಸಕ ಸ್ಥಾನ ರದ್ಧತಿಗೆ ಆಗ್ರಹ
ಕೋಲಾರ,ಸೆ.೧೬: ದಲಿತ ಮತ್ತು ಒಕ್ಕಲಿಗ ಸಮುದಾಯಗಳ ಬಗ್ಗೆ ಕೀಳಾಗಿ ಮಾತನಾಡಿದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ಶಾಸಕತ್ವ ಸ್ಥಾನವನ್ನು ದಲಿತರ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ರದ್ದುಗೊಳಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡ ಕಲ್ಕೆರೆ ವಿಜಯ್ ಕುಮಾರ್ ಆಗ್ರಹಿಸಿದ್ದಾರೆ.
ಪತ್ರಿಕೆ ಪ್ರಕಟಣೆ ನೀಡಿರುವ ಅವರು, ಮುನಿರತ್ನ ಅವರು ಜಾತಿ ನಿಂದನೆ ಹಾಗೂ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಹಾಗೂ ಗುತ್ತಿಗೆದಾರರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಶಾಸಕ ಮುನಿರತ್ನ ಅವರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಇಂಥವರಿಂದ ರಾಜ್ಯದಲ್ಲಿ ಜಾತಿ ಸಂಘರ್ಷಗಳು ಹೆಚ್ಚಾಗುತ್ತಿವೆ ಆದ್ದರಿಂದ ಶಾಸಕ ಮುನಿರತ್ನ ಅವರನ್ನು ಕೇವಲ ಬಂಧಿಸಿ ಬಿಡುವ ಕೆಲಸ ಆಗಬಾರದು ಅವರ ಶಾಸಕ ಸ್ಥಾನದಿಂದ ವಜಾ ಗೊಳಿಸಿ ಮುಂದಿನ ದಿನಗಳಲ್ಲಿ ಯಾರೊಬ್ಬರೂ ಸಹ ಜಾತಿ ನಿಂದನೆಗೆ ಮುಂದಾಗದಂತೆ ಇವರ ಮೇಲೆ ಶೀಘ್ರವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಹಾಗೂ ಗೃಹ ಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ದೇಶಕ್ಕೆ ಸ್ವತಂತ್ರ ಬಂದು ೭೭ ವರ್ಷಗಳಾಗಿದ್ದರು ಇನ್ನು ಜಾತಿ ನಿಂದನೆ ಮುಂದುವರೆಯುತ್ತದೆ ಇಂತಹವರಿಂದ ನಾವು ಇನ್ನೂ ಎಷ್ಟು ದಿನ ಶೋಷಣೆಗೆ ಒಳಗಾಗಬೇಕು ನೊಂದು ಬೆಂದಿರುವ ಜನರನ್ನು ಜಾತಿ ಹೆಸರಿನಲ್ಲಿ ನಿಂದಿಸುವುದು ಸರಿಯಲ್ಲ ಮುಂದಿನ ದಿನಗಳಲ್ಲಿ ಇಂಥವರಿಗೆ ತಕ್ಕ ಪಾಠ ಕಲಿಸಬೇಕು ಮತ್ತು ಬಿಜೆಪಿ ವರಿಷ್ಠರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶಾಸಕರನ್ನು ಈ ಕೂಡಲೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ದಲಿತ ಸಂಘಟನೆಗಳ ಮುಖಂಡ ಕಲ್ಕೆರೆ ವಿಜಯಕುಮಾರ್ ತಿಳಿಸಿದ್ದಾರೆ.