ಹೊರಗುತ್ತಿಗೆ ನೌಕರರ ಸಂಘ ಸಮಸ್ಯೆಗಳಿಗೆ ಸ್ಪಂದಿಸಿ
ಕೋಲಾರ,ಸೆ.೧೬:ರಾಜ್ಯದಲ್ಲಿ ಹೊರ ಗುತ್ತಿಗೆ ನೌಕರರಿಗೆ ಯಾವುದೇ ರೀತಿಯ ತೊಂದರೆಯಾದರೂ ಅವರ ಸಮಸ್ಯೆಗಳಿಗೆ ಪರಿಹಾರ ಹಾಗೂ ಹೋರಾಟ ಮಾಡಲು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ ಸದಾ ಸಿದ್ದವಿದ್ದು, ನೂತನವಾಗಿ ಆಯ್ಕೆಯಾಗಿರುವ ಜಿಲ್ಲಾಧ್ಯಕ್ಷರು ತಮ್ಮ ಜವಾಬ್ದಾರಿಗಳನ್ನು ಅರಿತು ಸಂಘವನ್ನು ಬಲಿಷ್ಠಗೊಳಿಸಬೇಕೆಂದು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾದ್ಯಕ್ಷ ಸುಧಾಕರ್ ಯಾದವ್ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಹೊರ ಹೊಲಯದಲ್ಲಿರುವ ಅಪೂರ್ವ ಹೋಟೆಲ್‌ನಲ್ಲಿ ದಿನಾಂಕ: ೧೪-೦೯-೨೦೨೪ ರಂದು ಜಿಲ್ಲಾಧ್ಯಕ್ಷರುಗಳಿಗೆ ನೇಮಕಾತಿ ಪತ್ರಗಳನ್ನು ನೀಡಿ ಮಾತನಾಡಿದ ಅವರು, ನೂತನ ಜಿಲ್ಲಾಧ್ಯಕ್ಷರುಗಳು ಕಾರ್ಯೋನ್ಮುಖರಾಗಿ ಹೊರಗುತ್ತಿಗೆ ನೌಕರರನ್ನು ಗುರುತಿಸಿ ಅವರನ್ನು ಸಂಘದ ಸದಸ್ಯರನ್ನಾಗಿ ಮಾಡಿಕೊಂಡು ಸಂಘವನ್ನು ಬಲಿಷ್ಠಗೊಳಿಸಬೇಕು. ಜಿಲ್ಲೆಯಲ್ಲಿ ಯಾರಿಗೆ ತೊಂದರೆಯಾದರೂ ತಕ್ಷಣ ಸ್ಪಂಧಿಸಿ ಅವರಿಗೆ ಪರಿಹಾರ ಒದಗಿಸಿಕೊಡಬೇಕು. ನೌಕರರಿಗೆ ಕಾನೂನು ನೆರವು ನೀಡಲು ಜಿಲ್ಲಾವಾರು ಕಾನೂನು ಸಲಹೆಗಾರರನ್ನಾಗಿ ವಕೀಲರುಗಳನ್ನು ನೇಮಕ ಮಾಡಲಾಗಿದೆ.
ಆಯಾ ಜಿಲ್ಲೆಯ ನೌಕರರಿಗೆ ಯಾವುದೇ ಸಮಸ್ಯೆಯಾದರೂ ಅವರು ಕಾನೂನಾತ್ಮಕವಾಗಿ ನೌಕರರಿಗೆ ಸಲಹೆ ಮಾರ್ಗದರ್ಶನ ನೀಡಲಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗಬೇಕು. ಇ.ಎಸ್.ಐ, ಪಿ.ಎಫ್, ಸರಿಯಾಗಿ ನೀಡಬೇಕು. ನೌಕರರನ್ನು ನೇಮಕಾತಿ ಮಾಡಿಕೊಂಡ ತಕ್ಷಣ ನೇಮಕಾತಿ ಪತ್ರ ನೀಡಬೇಕು ಎಂದು ವಿವಿಧ ಬೇಡಿಕೆಗಳನ್ನು ಪೂರ್ಣಗೊಳಿಸಲು ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರು ಹೆಚ್ಚು ಸದಸ್ಯತ್ವ ಮಾಡಿದಾಗ ಮಾತ್ರ ಸಂಘ ಬಲಿಷ್ಠವಾಗಿ ಅವರ ಬೇಡಿಕೆಗಳಿಗಾಗಿ ಹೋರಾಟ ಮಾಡಲು ಸಾಧ್ಯ ಎಂದರು.
ಸಂಘವನ್ನು ರಾಜ್ಯದಲ್ಲಿ ಕಾನೂನಾತ್ಮಕವಾಗಿ ಬಲಿಷ್ಟಪಡಿಸಬೇಕೆಂದು ಮುನಿರಾಜು ಎನ್. ವಕೀಲರು, ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸಲಹೆಗಾರರಾಗಿ ಮತ್ತು ಕೋಲಾರ ಜಿಲ್ಲಾ ಕಾನೂನು ಸಲಹೆಗಾರರಾಗಿ ವಾಸುದೇವರೆಡ್ಡಿ ವಕೀಲರು ರವರುಗಳನ್ನು ನೇಮಕಾತಿ ಮಾಡಲಾಗಿದೆ.
ನೂತನ ಜಿಲ್ಲಾಧ್ಯಕ್ಷರುಗಳು ನವೀನ್‌ಕುಮಾರ್ ಎಂ.ಎಂ. ಕೋಲಾರ ಜಿಲ್ಲೆ, ಮುನಿರಾಜು ಬೆಂಗಳೂರು ಗ್ರಾಮಾಂತರ ಜಿಲ್ಲೆ, ವೆಂಕಟೇಶ್ ಚಿಕ್ಕಬಳ್ಳಾಪುರ ಜಿಲ್ಲೆ, ಮುತ್ತುರಾಜ್ ರಾಯಚೂರು ಜಿಲ್ಲೆ ಅವರುಗಳನ್ನು ನೇಮಕಾತಿ ಮಾಡಲಾಗಿದೆ.
ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಸಮಿತಿಯ ರಾಜ್ಯ ಉಪಾಧ್ಯಕ್ಷ, ಗಂಗಾಧರ್ ಎನ್, ಹಾಗೂ ರಾಜ್ಯ ವಕ್ತಾರ ಸುನೀಲ್ ಕೆ.ಸಿ, ಕಮಿಟಿ ಸದಸ್ಯರುಗಳಾದ ರಾಜೇಶ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.