ದವಸಧಾನ್ಯ ದಾನ
ಬಾದಾಮಿ,ಮಾ8: ತಾಲೂಕಿನ ವೀರಶೈವ-ಲಿಂಗಾಯತರ ಶೃದ್ಧಾ ಕೇಂದ್ರವಾದ ಶ್ರೀ ಮದ್ವಿರಶೈವ ಶಿವಯೋಗಮಂದಿರಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ 40 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರೇಲರ್‍ನ ತುಂಬ ಬಿಳಿಜೋಳದ ಮೇವನ್ನು ಮತ್ತು ಶ್ರೀ ಮಠ ನಿತ್ಯ ದಾಸೋಹಕ್ಕೆ 30 ಕ್ವಿಂಟಲ್‍ಗೂ ಹೆಚ್ಚು ಜೋಳ ಮತ್ತು 20 ಕ್ವಿಂಟಲ್‍ಗೂ ಹೆಚ್ಚು ಕಡಲೆ ಹಾಗೂ ಇನ್ನಿತರ ದವಸಧಾನ್ಯಗಳನ್ನು ಶಿವಯೋಗಮಂದಿರದ ಶ್ರೀ ಮಠಕ್ಕೆ ದಾನವಾಗಿ ನೀಡಿದರು.
ಅಲ್ಲದೆ ಇಲಕಲ್ಲ ತಾಲೂಕಿನ ಬೆಂಕನಡೋಣಿ ಗ್ರಾಮದ ರೈತರು ಮತ್ತು ರೋಣ ಗ್ರಾಮದ ರೈತರು ಹೀಗೆ ಬೇರೆ ಬೇರೆ ತಾಲೂಕು ಮತ್ತು ಜಿಲ್ಲೆಗಳಿಂದ ಈ ವರ್ಷ ಸರಿಯಾದ ಮಳೆ ಇಲ್ಲದೆ ಬರ ವ್ಯಾಪಿಸಿದ್ದರೂ ಕೂಡಾ ತಾವು ಬೆಳೆದಷ್ಟೇ ಬೆಳೆಯಲ್ಲಿ ಒಂದು ಪಾಲನ್ನು ಶ್ರೀ ಮಠದ ಗೋಶಾಲೆಗೆ ದಾನ ಮಾಡುತ್ತಿರುವರು. ಅಲ್ಲದೆ ಗೋಶಾಲೆಗೆ ಜೋಳದ ಮೇವನ್ನು ತಮ್ಮ ಖರ್ಚಿನಲ್ಲೆ ತೆಗೆದುಕೊಂಡು ಬಂದು ದಾನ ನೀಡುತಿದ್ದಾರೆ. ರೈತರ ದಾನವನ್ನು ಮೆಚ್ಚಿ ಸಂಸ್ಥೆಯ ಉಪಾಧ್ಯಕ್ಷರಾದ ಮುಪ್ಪಿನ ಬಸವ ಮಹಾಸ್ವಾಮೀಜಿಗಳು ಸನ್ಮಾನಿಸಿ ಆಶೀರ್ವಾದ ಮಾಡಿದರು. ಸಂಸ್ಥೆಯ ಧರ್ಮದರ್ಶಿ ಎಂ.ಬಿ.ಹಂಗರಗಿ ಮತ್ತು ಇತರ ಮುಖಂಡರುಗಳು ಉಪಸ್ಥಿತರಿದ್ದರು.