ರಸ್ತೆ ಸಾರಿಗೆ ನಿವೃತ್ತ ನೌಕರರಿಗೂ ಸಂಬಳ ಹೆಚ್ಚಳ ಬಾಕಿ ಪಾವತಿ: ರಾ.ರೆಡ್ಡಿ
ಬೆಂಗಳೂರು,ಮಾ.೮:ಹಾಲಿ ಕಾರ್ಯನಿರ್ವಹಿಸುತ್ತಿರುವ ನೌಕರರಂತೆಯೇ ೨೦೨೦ರ ಜ.೧ ರಿಂದ ೨೦೨೩ರ ಫೆ. ೨೮ ರವರೆಗೆ ನಿವೃತ್ತ ಹಾಗೂ ಸಂಸ್ಥೆಯಿಂದ ಹೊರ ಹೋಗಿರುವ ಎಲ್ಲ ನೌಕರರಿಗೂ ಶೇ. ೧೫ರಷ್ಟು ವೇತನ ಹೆಚ್ಚಳ ಬಾಕಿ ನೀಡುವುದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಪ್ಪಿಗೆ ಸೂಚಿಸಿದ್ದಾರೆ.
ಸಾರಿಗೆ ನಿಗಮಗಳ ನೌಕರರ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪ್ರಮುಖರೊಂದಿಗೆ ರಾಮಲಿಂಗಾರೆಡ್ಡಿ ಗುರುವಾರ ಸಭೆ ನಡೆಸಿದರು.
ಸಭೆಯಲ್ಲಿ ೨೦೨೦ರ ಜ.೧ ರಿಂದ ೨೦೨೩ರ ಫೆ. ೨೮ ರವರೆಗೆ ನಿವೃತ್ತರಾದ ಮತ್ತು ಸಂಸ್ಥೆಯಿಂದ ಹೊರಹೋದ ಸುಮಾರು ೧೦ ಸಾವಿರ ಮಾಜಿ ನೌಕರರಿಗೂ ಶೇ. ೧೫ರಷ್ಟು ವೇತನ ಹೆಚ್ಚಳ ಬಾಕಿ ಪಾವತಿಸಲು ಒಪ್ಪಿಗೆ ಸೂಚಿಸಲಾಯಿತು. ಅದಕ್ಕಾಗಿ ೨೨೦ ಕೋಟಿ ರೂ.ಗಳ ಬಾಕಿ ಹಣ ಪಾವತಿಸುವ ಭರವಸೆ ನೀಡಿ. ಈ ಕುರಿತಂತೆ ಆದೇಶ ಹೊರಡಿಸುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸಾರಿಗೆ ಸಚಿವರು ಸೂಚಿಸಿದರು.
ಜನವರಿ ೨೦೨೪ ರಿಂದ ಹೆಚ್ಚಳ ಮಾಡಬೇಕಾಗಿರುವ ವೇತನ ಹೆಚ್ಚಳದ ಬಗ್ಗೆ ಮಾತನಾಡಿ ಮುಂದಿನ ದಿನಗಳಲ್ಲಿ ಹೊಸ ಬಸ್‌ಗಳ ಸೇರ್ಪಡೆಯಾಗಿ ಆದಾಯ ವೃದ್ದಿಸಲಿದ್ದು, ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಈ ಬಗ್ಗೆ ಕ್ರಮ ವಹಿಸುವುದಾಗಿ ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ತೀರ್ಮಾನಕ್ಕೆ ಎಲ್ಲ ಸಂಘಟನೆಗಳು ಹರ್ಷ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದರು.
ಈ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್, ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಬಿಎಂಟಿಸಿ ಎಂಡಿ ಆರ್. ರಾಮಚಂದ್ರನ್, ವಾ.ಕ.ರಾ ಸಂಸ್ಥೆ ಎಂಡಿ ಎಸ್. ಭರತ್, ಡಾ. ಕೆ. ನಂದಿನಿ ದೇವಿ ಮತ್ತಿತರರು ಉಪಸ್ಥಿತರಿದ್ದರು.