6 ಕೋಟಿ ಉಳಿತಾಯ ಬಜೆಟ್ ಮಂಡಿಸಿದ ಮುಡಾ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.08:- ಗುಂಪು ವಸತಿ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣವನ್ನು ಮತ್ತೆ ಪ್ರಸ್ತಾಪ ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2024-25ನೇ ಸಾಲಿಗೆ 6.03 ಕೋಟಿ ಉಳಿತಾಯ ಬಜೆಟ್ ಮಂಡಿಸಿದೆ.
ಗುರುವಾರ ಅಧ್ಯಕ್ಷ ಕೆ.ಮರೀಗೌಡ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಬಜೆಟ್ ಮಂಡಿಸಿ ಸದಸ್ಯರಿಂದ ಅನುಮೋದನೆ ಪಡೆದುಕೊಂಡರು. 831.80 ಕೋಟಿ ಸಂಪನ್ಮೂಲ ಕ್ರೋಢೀಕರಿಸಲು ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ಕೆ 825.77 ಕೋಟಿ ವ್ಯಯಿಸಲು ಉದ್ದೇಶಿಸಲಾಗಿದೆ. 2023-24ನೇ ಸಾಲಿನಲ್ಲಿ ಎಲ್ಲಾ ಮೂಲಗಳಿಂದ ಕ್ರೋಢೀಕರಿಸಲು ಉದ್ದೇಶಿಸಲಾಗಿದ್ದ ಒಟ್ಟು ಅಂದಾಜು ಸಂಪನ್ಮೂಲ 775.81 ಕೋಟಿ ಹಾಗೂ ಒಟ್ಟು ಅಂದಾಜು ವೆಚ್ಚ 788.24 ಕೋಟಿ ಪರಿಷ್ಕೃತ ಬಜೆಟ್‍ಗೂ ಅನುಮೋದನೆ ನೀಡಲಾಯಿತು.
ಯಾವ್ಯಾವ ಮೂಲದಿಂದ ಆದಾಯ:
ಮನೆ ಮತ್ತು ನಿವೇಶನ ಕಂದಾಯದಿಂದ 20 ಕೋಟಿ, ಖಾತೆ, ಕಂದಾಯ ಮತ್ತು ವರ್ಗಾವಣೆ ಶುಲ್ಕದಿಂದ 15 ಕೋಟಿ, ಕಾಮಗಾರಿ ಮೇಲ್ವಿಚಾರಣಾ ಶುಲ್ಕದಿಂದ 10 ಕೋಟಿ, ಸಾಮಾನ್ಯ ಆಡಳಿತ ಹಾಗೂ ಮಹಾಯೋಜನೆಗೆ ವಿವಿಧ ಮೂಲಗಳಿಂದ ಬಡಾವಣೆ ನಕ್ಷೆ ಶುಲ್ಕ, ಕಾರ್ಮಿಕ ಕಲ್ಯಾಣ ನಿಧಿ, ಕುಡಿಯುವ ನೀರು ಮತ್ತು ಮಲಿನ ನೀರು ಹೊರಸೂಸುವ ಮಾರ್ಗ, ಎಂಆರ್‍ಟಿಎಸ್ ಶುಲ್ಕ, ಜಲಸಂಗ್ರಹಗಾರ ಶುಲ್ಕ, ಹಸಿರು ಶುಲ್ಕದಿಂದ ಒಟ್ಟು 82.5 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಕೊಳಚೆ ಪ್ರದೇಶಗಳ ಅಭಿವೃದ್ಧಿ ಶುಲ್ಕದಿಂದ 90, ಅಭಿವೃದ್ಧಿ ನಿಧಿ-1ರ ಮೂಲಗಳಾದ ಮೂಲೆ ನಿವೇಶನ, ಮಧ್ಯಂತರ ನಿವೇಶನ ಮತ್ತು ಮನೆ ಹರಾಜು ಪ್ರಕ್ರಿಯೆಯಿಂದ 400 ಕೋಟಿ, ಪ್ರಾಧಿಕಾರದ ಬಡಾವಣೆಗಳಲ್ಲಿ ಲಭ್ಯವಾಗುವ ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆಯಿಂದ 5.08 ಕೋಟಿ, ನಿವೇಶನ ಹಂಚಿಕೆ ನಿಯಮ ಉಲ್ಲಂಘನೆ ಕ್ಷಯಪತ್ರ ದಂಡಶುಲ್ಕಗಳಿಂದ 10 ಕೋಟಿ. ಅಭಿವೃದ್ಧಿ ನಿಧಿ-2ಕ್ಕೆ ಕ್ರೋಢೀಕೃತವಾಗುವ ಸಂಪನ್ಮೂಲಗಳಾದ ಪ್ರಾಧಿಕಾರದ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿನ ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆ ಹಾಗೂ ವಾಣಿಜ್ಯ ಸಂಕೀರ್ಣಗಳ ಬಾಡಿಗೆ, ಗುತ್ತಿಗೆ ಸಂದಾಯದಿಂದ 13.76 ಕೋಟಿ ಅಂದಾಜಿಸಲಾಗಿದೆ.
ಯಾವುದಕ್ಕೆ ಎಷ್ಟು ವೆಚ್ಚ:
ಮಹಾಯೋಜನೆಯ ರಸ್ತೆಗಳ ಅಭಿವೃದ್ಧಿಗೆ 37 ಕೋಟಿ, ಆಡಳಿತ ವೆಚ್ಚ, ಅಧಿಕಾರಿ ಸಿಬ್ಬಂದಿಯ ವೇತನ, ಕಾನೂನು ವೆಚ್ಚ, ಲೆಕ್ಕಪರಿಶೋಧನಾ ಶುಲ್ಕ, ಹೊರಗುತ್ತಿಗೆ ನೌಕರರ ವೆಚ್ಚಕ್ಕಾಗಿ 40 ಕೋಟಿ, ಮಹಾಯೋಜನೆಯ ಪರಿಷ್ಕರಣೆಗಾಗಿ ಸಾಮಾನ್ಯ ಆಡಳಿತ ವೆಚ್ಚ 2 ಕೋಟಿ, ಪ್ರಾಧಿಕಾರದ ಆಸ್ತಿ ಸಂರಕ್ಷಣೆಗಾಗಿ 2 ಕೋಟಿ, ಎಲ್ಲ ಶಾಖೆಗಳ ದಾಖಲೆಗಳ ಗಣಕೀಕರಣಕ್ಕಾಗಿ 5 ಕೋಟಿ, ಕಟ್ಟಡಗಳ ನಿರ್ವಹಣೆಗೆ 5 ಕೋಟಿ, ಪ್ರಾಧಿಕಾರದಿಂದ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, 30 ಕೋಟಿ, ಕೆರೆಗಳ ಅಭಿವೃದ್ಧಿಗೆ 55 ಕೋಟಿ, ಕೊಳಚೆಪ್ರದೇಶಗಳ ಅಭಿವೃದ್ಧಿಗೆ 27 ಲಕ್ಷ ವ್ಯಯಿಸಲು ಯೋಜಿಸಲಾಗಿದೆ.
ಮೂಲಸೌಕರ್ಯ ಕಾಮಗಾರಿಗೆ 44 ಕೋಟಿ, ನೀರು ಸರಬರಾಜು ಯೋಜನೆಗೆ 100 ಕೋಟಿ, ಪ್ರಾಧಿಕಾರದ ಬಡಾವಣೆಗಳ ಉದ್ಯಾನ ಅಭಿವೃದ್ಧಿಗೆ 15 ಕೋಟಿ, ಅಂಬೇಡ್ಕರ್ ಭವನದ 2ನೇ ಹಂತದ ಕಾಮಗಾರಿಗೆ 25 ಕೋಟಿ ಹಾಗೂ ಭೂಸ್ವಾಧೀನ ವೆಚ್ಚಕ್ಕಾಗಿ 50 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಹೊರಪರಿಧಿ ರಸ್ತೆ:
ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನದಟ್ಟಣೆಗೆ ಅನುಗುಣವಾಗಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಪ್ರಾಧಿಕಾರದಿಂದ ಈಗಾಗಲೇ ನಿರ್ಮಿಸಿರುವ ಹೊರವರ್ತುಲ ರಸ್ತೆಯ ಹೊರಭಾಗಕ್ಕೆ 5ರಿಂದ 8 ಕಿ.ಮೀ.ವರೆಗೆ ಪ್ರಾಧಿಕಾರದ ಬಡಾವಣೆ, ಖಾಸಗಿ ಬಡಾವಣೆಗಳು, ಕೈಗಾರಿಕಾ ವಸಾಹತುಗಳಿವೆ. ಜತೆಗೆ ವಿಮಾನನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಯೋಜನೆಯೂ ಇದೆ. ಮಹಾಯೋಜನೆ 2031ರಲ್ಲಿ ಮೈಸೂರು-ಚೆನ್ನೈ ಬುಲೆಟ್ ಟ್ರೇನ್ ಹಾಗೂ ಮೈಸೂರು-ಮಂಗಳೂರು ರಸ್ತೆ ಮೇಲ್ದರ್ಜೆಗೇರಿಸುವ ಯೋಜನೆ ಇದರಲ್ಲಿ ಒಳಗೊಂಡಿದೆ. ನಗರದ ಬೆಳವಣಿಗೆ ವೇಗ ಪಡೆಯಲಿದ್ದು, ಸಂಚಾರ ದಟ್ಟಣೆಯೂ ಹೆಚ್ಚಾಗಲಿದೆ. ಗೀಗಾಗಿ 73.25 ಕಿ.ಮೀ. ಪೆರಿಫೆರಲ್ ರಿಂಗ್ ರಸ್ತೆ (ಹೊರಪರಿಧಿ ರಸ್ತೆ) ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. 45 ಮೀ. ಅಗಲದ ರಸ್ತೆ ಇದಾಗಿರಲಿದೆ.
ಈ ರಸ್ತೆಯ ಅಕ್ಕಪಕ್ಕದಲ್ಲಿ ಪಾರಂಪರಿಕ, ಕ್ರೀಡೆ, ಗಾರ್ಮೆಂಟ್ಸ್, ಐಟಿ ಬಿಟಿ, ಶಿಕ್ಷಣ-ಆರೋಗ್ಯ, ಹಾರ್ಡ್‍ವೇರ್ ಹಾಗೂ ಸಾಫ್ಟ್‍ವೇರ್ ಕ್ಲಸ್ಟರ್‍ಗಳನ್ನು ಪ್ರಸ್ತಾಪಿಸಲಾಗಿದೆ. ಈ ವಾಣಿಜ್ಯ ಕ್ಲಸ್ಟರ್‍ಗಳಿಂದ ಕೈಗಾರಿಕೆ ಅಭಿವೃದ್ಧಿ ಹೊಂದಲಿದ್ದು, ಸಮಗ್ರ ಬೆಳವಣಿಗೆಗೆ ಅನುಕೂಲವಾಗಲಿದೆ. ಈ ರಸ್ತೆಯು ಅರಣ್ಯ ಪ್ರದೇಶದಿಂದ ಮುಕ್ತವಾಗಿರಲಿದೆ. ನಿರ್ಮಾಣ ಸಂಬಂಧ ಡಿಪಿಆರ್ ತಯಾರಿಕೆಗೆ 10 ಕೋಟಿ ಅಂದಾಜಿಸಲಾಗಿದೆ.
560 ಮನೆಗಳ ನಿರ್ಮಾಣ:
ಮುಡಾಗೆ ನಿವೇಶನ ಕೋರಿ ಸಲ್ಲಿಕೆಯಾಗಿರುವ 80 ಸಾವಿರಕ್ಕೂ ಹೆಚ್ಚು ಅರ್ಜಿಗಳು ಹಾಗೂ ಮನೆ ಕೋರಿ ಬೇಡಿಕೆ ಸಮೀಕ್ಷೆಯಲ್ಲಿ ಸಲ್ಲಿಕೆಯಾಗಿರುವ 26 ಸಾವಿರ ಅರ್ಜಿಗಳನ್ನು ಗಮನದಲ್ಲಿಟ್ಟುಕೊಂಡು ಗುಂಪು ವಸತಿ ಯೋಜನೆಗೆ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ. ಬಹುಮಹಡಿ ವಸತಿ ಯೋಜನೆಯನ್ನು ಹಸಿರು ಕಟ್ಟಡ ರೇಟಿಂಗ್ ಪಡೆಯಲು ಉದ್ದೇಶಿಸಲಾಗಿದ್ದು, ಈ ಅಂಶವನ್ನು ಡಿಪಿಆರ್‍ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರತಿ ಸ್ಥಳದಲ್ಲಿ ಮೊದಲ ಹಂತದಲ್ಲಿ ಒಂದು ಟವರ್‍ನಂತೆ ಯೋಜನೆ ಅನುಷ್ಠಾನ ಪ್ರಾರಂಭಿಸಿ ಹಂತ ಹಂತವಾಗಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ವಿಜಯನಗರ 4ನೇ ಹಂತ 2ನೇ ಘಟ್ಟ ಬಡಾವಣೆಯಲ್ಲಿ ಒಟ್ಟು 560 ಮನೆಗಳ 12 ಬಹುಮಹಡಿ ಕಟ್ಟಡವನ್ನು ಶಿಯರ್‍ವಾಲ್ ತಂತ್ರಜ್ಞಾನ ಅಳವಡಿಸಿಕೊಂಡು ಅಂದಾಜು ಮೊತ್ತು 250 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಹಂತ ಹಂತವಾಗಿ ಅನುಷ್ಠಾನಗೊಳಿಸಲು ಪ್ರಸಕ್ತ ವರ್ಷದಲ್ಲಿ 400 ಕೋಟಿ ಕಾಯ್ದಿರಿಸಲಾಗಿದೆ.
ಗ್ರೇಡ್ ಸಪರೇಟರ್‍ಗಳ ನಿರ್ಮಾಣ:
ನಗರದ ಹಾಲಿ ಇರುವ ವರ್ತುಲ ರಸ್ತೆಯಲ್ಲಿ ಮುಖ್ಯ ಜಂಕ್ಷನ್‍ಗಳಾದ ವಿಜಯನಗರ 4ನೇ ಹಂತ (ಬಸವನಹಳ್ಳಿ), ಬೋಗಾದಿ ರಸ್ತೆ ಹಾಗೂ ಜೆ.ಪಿ.ನಗರ ಕುಪ್ಪಲೂರು ರಸ್ತೆ ಜಂಕ್ಷನ್‍ಗಳಲ್ಲಿ ಸಿಗ್ನಲ್‍ಗಳನ್ನು ಅಳವಡಿಸಲಾಗಿದೆ. ಆದರೆ, ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಕೆಳ ಸೇತುವೆ (ಅಂಡರ್‍ಪಾಸ್) ಅಥವಾ ಮೇಲ್ಸೇತುವೆ (ಫ್ಲೈಓವರ್) ನಿರ್ಮಾಣ ಮಾಡಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಡಿಪಿಆರ್ ಸಿದ್ಧತೆಗಾಗಿ ಸಮಾಲೋಚಕರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ಈ ಸಾಲಿನಲ್ಲಿ 40 ಕೋಟಿ ಕಾಯ್ದಿರಿಸಲಾಗಿದೆ.
ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಮಹಾನಗರಪಾಲಿಕೆ ಆಯುಕ್ತೆ ಎನ್.ಎಸ್.ಮಧು, ನಗರ ಯೋಜನಾ ಸದಸ್ಯ ಆರ್.ಶೇಷ, ಎಂಜಿನಿಯರಿಂಗ್ ಸದಸ್ಯ ಎನ್.ಬಿ.ಚನ್ನಕೇಶವ, ಸೆಸ್ಕ್ ಎಸ್‍ಇ ಸುನೀಲ್‍ಕುಮಾರ್.ಎ.ಎ ಹಾಗೂ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಆಸೀಫ್ ಇಕ್ಬಾಲ್ ಖಲೀಲ್ ಇದ್ದರು.