ಬಹುರೂಪಿಗೆ ಅದ್ಧೂರಿ ಚಾಲನೆ
ಸಂಜೆವಾಣಿ ನ್ಯೂಸ್
ಮೈಸೂರು ಮಾ.8:- ಮೈಸೂರಿನ ರಂಗಾಯಣದವತಿಯಿಂದ ಮಾರ್ಚ್ 6ರಿಂದ 11ರವರೆಗೆ ನಡೆಯುವ 24ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆಯಿತು.
ಬಸವಣ್ಣನವರ ವಚನದ ಸಾಲಿನ ‘ಇವ ನಮ್ಮವ ಇವ ನಮ್ಮವ’ ಶೀರ್ಷಿಕೆಯೊಂದಿಗೆ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅನಾವರಣ ಮಾಡಲಾಗಿದ್ದು, ರಂಗಾಯಣದ ವನರಂಗದಲ್ಲಿ ನಡೆದ ಉದ್ಘಾಟನಾ ಸಮಾರಂಭಕ್ಕೆ ಸಾಹಿತಿ ಜಯಂತ್ ಕಾಯ್ಕಿಣಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿ, ರಂಗಾಯಣಕ್ಕೆ ಬಂದರೆ ಬಿ ವಿ ಕಾರಂತರ ನೆನಪು ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕೌಟುಂಬಿಕತೆ ಶಿಥಿಲಗೊಳ್ಳುತ್ತಿದೆ. ರಂಗಭೂಮಿ ಎಂದರೆ ಕೇವಲ ಒಂದು ಕಲ್ಪನೆಯಲ್ಲ, ಜೀವನದ ಭಾಗವೇ ಆಗಿದೆ. ಕಲೆಯ ಬಗ್ಗೆ ಮಾತನಾಡುವಾಗ ವೈಭವೀಕರಿಸುವ ಅಗತ್ಯವಿಲ್ಲ. ಎಲ್ಲಾ ಕಲೆಯೂ ಅಣಕವೇ. ನಮ್ಮ ಸಮಾಜವೆಂಬ ಚಪ್ಪರ ಕೇವಲ ಒಂದು ಕಂಬದ ಮೇಲೆ ನಿಂತಿಲ್ಲ, ಸಾವಿರಾರು ಕಂಬಗಳ ಮೇಲೆ ನಿಂತಿದೆ ಎಂದು ಹೇಳಿದರು.
ಶಾಸಕ ಹರೀಶ್ ಗೌಡ, ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಂಚಾಲಕ ಪೆÇ್ರ.ಹೆಚ್.ಎಸ್ ಉಮೇಶ್, ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಶಿವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕಿ ನಿರ್ಮಲ ಮಠಪತಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.