ಕೊಬ್ಬರಿ ಖರೀದಿ ತಾರತಮ್ಯ ನೀತಿ ವಿರೋಧಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.08: ಕೊಬ್ಬರಿ ಖರೀದಿ ಪ್ರಮಾಣ ನಿಗಧಿ ಪಡಿಸುವಲ್ಲಿ ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ಬಗ್ಗೆ ತಾರತಮ್ಯ ನೀತಿ ಅನುಸರಿಸಿ ಜಿಲ್ಲೆಯ ಕೊಬ್ಬರಿ ಬೆಳೆಗಾರರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿ ತಾಲೂಕಿನ ನೂರಾರು ಕೊಬ್ಬರಿ ಬೆಳೆಗಾರ ರೈತರು ಪಟ್ಟಣದಲ್ಲಿಂದು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು..
ಕೊಬ್ಬರಿ ಖರೀದಿ ತಾರತಮ್ಯ ನೀತಿ ವಿರೋಧಿಸಿ ಪಟ್ಟಣದ ಎ.ಪಿ.ಎಂ.ಸಿ ಕಛೇರಿಯ ಆವರಣದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ಕೊಬ್ಬರಿ ಬೆಳೆಗಾರ ರೈತರು ರಾಜ್ಯ ಸರ್ಕಾರದ ತಾರತಮ್ಯ ನೀತಿಯ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಮಿನಿವಿಧಾನಸೌಧದ ಮುಂದೆ ಕೆಲಕಾಲ ಧರಣಿ ನಡೆಸಿ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ ಜಿಲ್ಲೆಗೆ ನಿಗಧಿ ಪಡಿಸಿರುವ ಕೊಬ್ಬರಿ ಖರೀದಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರ 87 ಸಾವಿರ ಕ್ವಿಂಟಾಲ್ ಕೊಬ್ಬರಿಯನ್ನು ಜಿಲ್ಲೆಯ ರೈತರಿಂದ ಖರೀದಿ ಮಾಡಿತ್ತು. ಪ್ರಸಕ್ತ ಸಾಲಿನಲ್ಲಿ ಕೇವಲ 40 ಸಾವಿರ ಕ್ವಿಂಟಾಲ್ ಖರೀದಿಯನ್ನು ನಿಗಧಿ ಮಾಡಿದೆ. ತುಮಕೂರು ಜಿಲ್ಲೆಗೆ 3.40 ಲಕ್ಷ ಕ್ವಿಂಟಾಲ್ ಪ್ರಮಾಣದ ಕೊಬ್ಬರಿ ಖರೀದಿ ನಿಗಧಿ ಮಾಡಿದ್ದರೆ ಹಾಸನ ಜಿಲ್ಲೆಗೆ 1.75 ಲಕ್ಷ ಕ್ವಿಂಟಾಲ್ ನಿಗಧಿ ಮಾಡಿದೆ. ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯದ ಚಾಮರಾಜನಗರ ಜಿಲ್ಲೆಗೂ 50 ಸಾವಿರ ಕ್ವಿಂಟಾಲ್ ಖರೀದಿಗೆ ನಿಗಧಿ ಪಡಿಸಲಾಗಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯುವ ಮಂಡ್ಯ ಜಿಲ್ಲೆಗೆ ಕಳೆದ ಸಾಲಿಗಿಂತಲೂ ಕಡಿಮೆ ಪ್ರಮಾಣ ನಿಗಧಿ ಪಡಿಸಿ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಲಾಗಿದೆ. ಇದೊಂದು ಅವೈಜ್ಞಾನಿಕವಾದ ಖರೀದಿ ನೀತಿಯಾಗಿದ್ದು ರಾಜ್ಯ ಸರ್ಕಾರ ತಕ್ಷಣವೇ ತನ್ನ ತಾರತಮ್ಯ ನೀತಿಯನ್ನು ಸರಿಪಡಿಸಿ ಜಿಲ್ಲೆಯಿಂದ ಕನಿಷ್ಠ 90 ಸಾವಿರ ಕ್ವಿಂಟಾಲ್ ಕೊಬ್ಬರಿ ಖರೀದಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರೂ ಕೊಬ್ಬರಿ ಖರೀದಿ ನೀತಿಯಲ್ಲಿ ಆಗಿರುವ ತಾರತಮ್ಯದ ವಿರುದ್ದ ಧ್ವನಿಯೆತ್ತಿ ಜಿಲ್ಲೆಯ ರೈತರ ಹಿತಕಾಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಒಂದು ಕಾಲದಲ್ಲಿ ಕಬ್ಬು ಮತ್ತು ಭತ್ತದ ಬೆಳೆಗೆ ಹೆಸರಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ತೆಂಗಿನ ಬೆಳೆ ಪ್ರಮಾಣ ವಿಸ್ತರಿಸುತ್ತಿದೆ. ಅಧಿಕವಾದ ಕೃಷಿ ವೆಚ್ಚ, ಕೂಲಿ ಕಾರ್ಮಿಕರ ಕೊರತೆ, ಭತ್ತ ಮತ್ತು ಕಬ್ಬಿನ ಕಟಾವು ಸಂದರ್ಬದಲ್ಲಿ ಕಟಾವು ಕಾರ್ಮಿಕರು ರೈತರಿಂದ ನಿರೀಕ್ಷೆಗೆ ಮೀರಿದ ಕೂಲಿಗೆ ಒತ್ತಡ ಹಾಕುವುದು ಮುಂತಾದ ಕಾರಣಗಳಿಂದ ಜಿಲ್ಲೆಯ ರೈತರು ಕಬ್ಬು ಮತ್ತು ಭತ್ತದ ಬೆಳೆಯಿಂದ ಹಿಂದೆ ಸರಿಯುತ್ತಿದ್ದಾರೆ. ತೆಂಗಿನ ಬೆಳೆ ವಿಸ್ತಾರಗೊಳ್ಳುತ್ತಿರುವುದರಿಂದ ಕೊಬ್ಬರಿ ಉತ್ಪಾದಕರ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ. ರಾಜ್ಯ ಸರ್ಕಾರ ಕೊಬ್ಬರಿ ಖರೀದಿಯ ಸಂದರ್ಭದಲ್ಲಿ ಜಿಲ್ಲೆಯ ತೆಂಗು ಬೆಳೆ ಕ್ಷೇತ್ರದ ವಿಸ್ತಾರತೆಯನ್ನು ಗಮನಿಸಬೇಕು ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಸಾಂಕೇತಿಕವಾಗಿ ನಮ್ಮ ಮನವಿ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರ ತನ್ನ ತಾರತಮ್ಯ ನೀತಿಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಕರಪತ್ರ ಹಂಚಿ ತಾಲೂಕು ಕಛೇರಿಯ ಮುಂದೆ ಅನಿರ್ಧಿಷ್ಟ ಕಾಲದ ಚಳುವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ತಹಸೀಲ್ದಾರ್ ನಿಸರ್ಗಪ್ರಿಯ ರೈತರ ಮನವಿ ಸ್ವೀಕರಿಸಿ ರೈತರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.