ಶಾಸಕ ಲಕ್ಷ್ಮಣ ಸವದಿ ಅವರನ್ನ ಮೆಚ್ಚಿ ಹಾಡಿ ಹೊಗಳಿದ ಸಿಎಂ ಸಿದ್ದರಾಮಯ್ಯ.
ಅಥಣಿ : ಮಾ.8:ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಒಬ್ಬ ಕ್ರೀಯಾಶೀಲ ರಾಜಕಾರಣಿ. ರೈತಪರ, ಜನಪರ ಕಾಳಜಿಯುಳ್ಳ ಜನಪ್ರಿಯ ನಾಯಕರಾಗಿದ್ದಾರೆ. ಅವರು ಬೇಕಾದರೆ ಮಂತ್ರಿ ಆಗಿ ಅಧಿಕಾರ ಅನುಭವಿಸಬಹುದಿತ್ತು ಆದರೆ ಅವರು ರೈತರ ಕಲ್ಯಾಣಕ್ಕಾಗಿ ಅವರು ಅಥಣಿ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲು ಶ್ರಮಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಇಂದು ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಸುಮಾರು 1486 ಕೋಟಿ ರೂ. ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಇದು ಈ ಭಾಗದ ರೈತರ ನೀರಾವರಿ ಸಮಸ್ಯೆ ನೀಗಿಸಿ ಅವರ ಬಾಳಲ್ಲಿ ಹೊಸ ಬೆಳಕು. ಹೊಸ ಆಶಾಕಿರಣ ಮೂಡಿಸಲಿದೆ. ಆದ್ದರಿಂದ ಇಲ್ಲಿನ ಜನತೆ ರೈತ ನಾಯಕ ಲಕ್ಷ್ಮಣ ಸವದಿಯವರ ಕೈ ಮತ್ತಷ್ಟು ಬಲಪಡಿಸಬೇಕು. ಮುಂಬರುವ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ನೀಡವ ಮುನ್ಸೂಚನೆ ನೀಡಿದರು.
ಈ ಯೋಜನೆಯಿಂದ ತಾಲೂಕಿನ ಪೂರ್ವ ಭಾಗದ 10ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 70 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶದ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಿರುವ, ಹಾಗೂ 13ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಸುಮಾರು 1486 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಬೃಹತ್ ಏತ ನೀರಾವರಿ ಯೋಜನೆಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ, ಹಿಂದುಳಿದವರಿಗೆ, ರೈತರಿಗೆ ಬಹಳಷ್ಟು ಅನುಕೂಲವಾಗಿವೆ. ಆದ್ದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿದರು.