ಹೆದ್ದಾರಿ ನಿರ್ಮಾಣದಿಂದ ಪ್ರಗತಿಯ ಜೊತೆಗೆ ಸಂಪರ್ಕ ಕ್ರಾಂತಿ: ಗುತ್ತೇದಾರ್
ಅಫಜಲಪುರ:ಮಾ.8: ಭಾರತ ಮಾಲಾ ಯೋಜನೆಯಡಿ ಸೂರತ್-ಚೆನ್ನೈವರೆಗಿನ ಗ್ರೀನ್ ಫೀಲ್ಡ್ ಹೆದ್ದಾರಿ ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿದೆ. ಕರ್ನಾಟಕದಲ್ಲಿ ಈ ಕಾಮಗಾರಿ 12 ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.
ಅಫಜಲಪುರ ಮತ್ತು ಜೇವರ್ಗಿ ತಾಲೂಕಿನಾದ್ಯಂತ ನಡೆಯುತ್ತಿರುವ ಸೂರತ್-ಚೆನ್ನೈ ಎಕ್ಸ್‍ಪ್ರೆಸ್ ಹೈವೇ ಭಾರತ ಮಾಲಾ ಯೋಜನೆಯಡಿ ರಸ್ತೆ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ದೇಶದ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆದ್ಯತೆ ನೀಡಿದ್ದಾರೆ. ಅದರಂತೆ ಈಗಾಗಲೇ ಮಹಾರಾಷ್ಟ್ರದಲ್ಲಿ ಭಾರತ ಮಾಲಾ ಯೋಜನೆಯಡಿ ರಸ್ತೆ ನಿರ್ಮಿಸಲಾಗಿದ್ದು ಸುಮಾರು 1,575 ಕೋಟಿ ರೂ.ವೆಚ್ಚದಲ್ಲಿ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. 6 ಪಥದ ಈ ಹೆದ್ದಾರಿಯಿಂದ ಈ ಭಾಗದ ಜನರಿಗೆ ಹಾಗೂ ರೈತರಿಗೆ ತುಂಬಾ ಅನುಕೂಲವಾಗಲಿದೆ. ಕಲಬುರಗಿಯಿಂದ ಸೂರತ್ ಗೆ ಹೋಗಲು ಸುಮಾರು 24 ಗಂಟೆ ಸಮಯ ಬೇಕು. ಆದರೆ, ಈ ಭಾರತ ಮಾಲಾ ಯೋಜನೆಯಡಿ ರಸ್ತೆ ನಿರ್ಮಾಣವಾದರೆ ಕೇವಲ 14 ಗಂಟೆಯಲ್ಲಿ ಕಲಬುರಗಿಯಿಂದ ಸೂರತ್ ಗೆ ತಲುಪಬಹುದಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಭಾರತ್ ಮಾಲಾ ಕಾರಿಡಾರ್ ಈ ಭಾಗಕ್ಕೆ ದೊಡ್ಡ ಕೊಡುಗೆಯಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಯ ಚಿತ್ರಣವೇ ಬದಲಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗುತ್ತಿರುವ ಹೆದ್ದಾರಿ ಕಾಮಗಾರಿ ಗುಣಮಟ್ಟ ಕಾಯ್ದುಕೊಂಡು ಶೀಘ್ರ ಪೂರ್ಣಗೊಳಿಸಬೇಕು. ಈ ರಸ್ತೆ ಕಾಮಗಾರಿ ನಿರ್ಮಾಣವಾಗುವುದರಿಂದ ಅಭಿವೃದ್ಧಿಗೆ ಸಾಕಷ್ಟು ವೇಗ ಸಿಗಲಿದೆ. ಕಳೆದ 4 ತಿಂಗಳ ಹಿಂದೆ ಹೆದ್ದಾರಿ ಕಾಮಗಾರಿ ಪರಿಶೀಲನೆ ಕೈಗೊಂಡಾಗ ಮಂದಗತಿಯಲ್ಲಿ ಸಾಗುತ್ತಿತ್ತು. ಈಗ ಭರದಿಂದ ಸಾಗುತ್ತಿದೆ. ಅಲ್ಲದೇ ಸರಿಸುಮಾರು 77 ಸಣ್ಣಪುಟ್ಟ ರೈತರ ಜಮೀನುಗಳಿಗೆ ಹೋಗುವ ರಸ್ತೆಗಳನ್ನು ಹೆಚ್ಚುವರಿ ಮಾಡಲಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಈ ಭಾಗಕ್ಕೆ ಬಹುದೊಡ್ಡ ಕಾಣಿಕೆ ನೀಡಿದ್ದಾರೆ. ಭಾರತ್ ಮಾಲಾ ರಸ್ತೆ ನಿರ್ಮಾಣವಾಗುವುದರಿಂದ ಅಕ್ಕ ಪಕ್ಕದ ಜಮೀನುಗಳ ಮೌಲ್ಯವು ದಿಢೀರನೆ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ. ಸಿಂಗಾಪೂರ ಮಾದರಿಯ ಈ ರಸ್ತೆ ನಿರ್ಮಾಣವಾಗುವುದರಿಂದ ಪ್ರಗತಿಯ ಜತೆಗೆ ಸಂಪರ್ಕ ಕ್ರಾಂತಿ ಉಂಟಾಗಲಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ 71 ಕಿ.ಮೀ ರಸ್ತೆ ಹಾದು ಹೋಗುವ ಕಾರಣ ಸೋಲಾಪುರ ಭಾಗ ಮತ್ತು ಬೆಂಗಳೂರು ಕಡೆಗೆ ಸಂಚಾರದ ಅವಧಿ ಉಳಿತಾಯವಾಗಲಿದೆ ಮತ್ತು ಸುರಕ್ಷಿತ ಪ್ರಯಾಣ ನಮ್ಮದಾಗಲಿದೆ ಎಂದು ಹೇಳಿದರು. ಇಂತಹ ದೊಡ್ಡ ಕೊಡುಗೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಿತಿನ್ ಗಡ್ಕರಿ ಹಾಗೂ ಲೋಕಸಭಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಶಿವರಾಜ್ ರದ್ದೇವಾಡಗಿ, ಗುತ್ತಿಗೆದಾರ ಪ್ರಬಂಧಕರಾದ ಅಜಯ್ ದೇವ್, ಸುಭಾಷ್ ಇಂಗಳೆ, ಶಿವು ಗಾಣೂರ ಸೇರಿದಂತೆ ಅನೇಕರಿದ್ದರು.