ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾ ಪೂಜೆ ಹಿನ್ನೆಲೆ:ಆಳಂದ ತಾಲೂಕಿನಲ್ಲಿ‌ ಮದ್ಯ ಮಾರಾಟ ನಿಷೇಧ
ಕಲಬುರಗಿ:ಮಾ.7: ಆಳಂದ ತಾಲ್ಲೂಕಾ ಹಿಂದೂ ಜಾಗರಣ ವೇದಿಕೆ ಮತ್ತು ಶ್ರೀ ರಾಘವ ಚೈತನ್ಯ ಮಂದಿರ ಜೀರ್ಣೋದ್ಧಾರ ಸಮಿತಿಯು ಮಹಾ ಶಿವರಾತ್ರಿ ಪ್ರಯುಕ್ತ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಮಾರ್ಚ್ 8 ರಂದು ಮಹಾಪೂಜೆ ಕೈಗೊಳ್ಳಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಆಳಂದ ತಾಲ್ಲೂಕಿನಾದ್ಯಂತ ಮಾರ್ಚ್ 7ರ ರಾತ್ರಿ 11‌ ರಿಂದ ಮಾರ್ಚ್ 9ರ ಬೆಳಿಗ್ಗೆ 6 ಗಂಟೆ ವರೆಗೆ ಕರ್ನಾಟಕ ಅಬಕಾರಿ ಕಾಯ್ದೆ-1956ರ ಕಲಂ 21ರನ್ವಯ ಎಲ್ಲಾ ತರಹದ ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಗುರುವಾರ ಆದೇಶಿಸಿದ್ದಾರೆ.
ಎಲ್ಲಾ ತರಹದ ಮಧ್ಯ ತಯಾರಿಕಾ ಘಟಕಗಳನ್ನು, ಮದ್ಯಪಾನ, ಸರಾಯಿ, ಶೇಂಧಿ, ಸ್ವದೇಶಿ ಹಾಗೂ ವಿದೇಶಿ ಮದ್ಯಪಾನ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುವುದನ್ನು ನಿಷೇಧಿಸಿದಲ್ಲದೆ ಈ ಅವಧಿಯಲ್ಲಿ ಬಾರ್, ರೆಸ್ಟೋರೆಂಟ್ ಗಳನ್ನು ಸಹ ಮುಚ್ಚುವಂತೆ ಆದೇಶದಲ್ಲಿ ತಿಳಿಸಲಾಗಿದೆ.