ಜನಸ್ಪಂದನಕ್ಕೆ ಹರಿದು ಬಂದ ಜನಸಮೂಹ:ಜನರ ಸಮಸ್ಯೆಗೆ ಕಿವಿಯಾಗಲೆಂದೆ ಜನಸ್ಪಂದನ ಕಾರ್ಯಕ್ರಮ ಆಯೋಜನೆ:ಪ್ರಿಯಾಂಕ್ ಖರ್ಗೆ
ಕಲಬುರಗಿ:ಮಾ.7:ಜನರ ಸಮಸ್ಯೆಗಳಿಗೆ ಕಿವಿಯಾಗಬೇಕೆಂದೆ ಜನಸ್ಪಂದನ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಲಾಗುತ್ತಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.ಬಿ.ಟಿ. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನಸ್ಪಂದನ ಸಬೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅರ್ಜಿಗಳನ್ನು ಕೌಂಟರ್ ನಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಿರಿ. ಸ್ವೀಕೃತ. ಪಡೆದಲ್ಲಿ ಮಾತ್ರ ಮುಂದೆ ಅದರ ಸ್ಥಿತಿಗತಿ ಅರಿಯಲು ಸಾಧ್ಯ ಎಂದು ತಿಳಿಸಿದರು.
ಪಡಿತರ ಕಾರ್ಡ್ ವಿತರಣೆಯಾಗಿಲ್ಲ ಎಂಬ ಸಾರ್ವಜನಿಕರೊಬ್ಬರ ಅಹವಾಲಿಗೆ ಸ್ಪಂದಿಸಿದ ಸಚಿವರು, ಇಂದಿಲ್ಲಿ ಪಡಿತರ ಕಾರ್ಡ್ ಸಮಸ್ಯೆ ಹೊತ್ತಿಬಂದವರಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನಸ್ಪಂದನ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಅರ್ಜಿ ಹಿಡಿದುಕೊಂಡು ಬಂದಿದ್ದರು. ಪ್ರತಿಯೊಬ್ಬರ ಸಮಸ್ಯೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಶಾಂತ ರೀತಿಯಿಂದ ಆಲಿಸಿದರು. ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಆರಂಭವಾದ ಸಾರ್ವಜನಿಕ ಸಮಸ್ಯೆ ಆಲಿಕೆ ಸಂಜೆ 5 ಗಂಟೆ ವರೆಗೆ ನಿರಂತರ ಜರುಗಿತ್ತು. ಬಂದಂತಹ ಎಲ್ಲಾ ಜನರ ಅಹವಾಲು ಆಲಿಸಿಯೆ ಸಚಿವರು ವೇದಿಕೆಯಿಂದ ನಿರ್ಗಮಿಸಿದರು. ಉದ್ಯೋಗ ಕೊಡಿಸಲು, ಸಾಲ ಮಂಜೂರಾತಿಗೆ, ಪಡಿತರ ವಿತರಣೆ, ಪೋಡಿ ತಿದ್ದುಪಡಿ, ವೇತನ ಸರಿಯಾಗಿ ಪಾವತಿ ಮಾಡುತ್ತಿಲ್ಲ ಹೀಗೆ ನಾನಾ ತರಹದ ಸಮಸ್ಯೆಗಳು ಕೇಳಿಬಂದವು. ಸ್ಥಳದಲ್ಲಿಯೇ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಜನಸ್ಪಂದನ ಸಭೆಯಲ್ಲಿ ಬಂದ ಅರ್ಜಿಗಳನ್ನು ಪ್ರಥಮಾದ್ಯತೆ ಮೇಲೆ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.
ಜನಸ್ಪಂದನದಲ್ಲಿ ಕೇಳಿಬಂದ ಸಾರ್ವಜನಿಕರ ಸಮಸ್ಯೆಗಳು:
8 ತಿಂಗಳಿಂದ ಪಗಾರ್ ಇಲ್ರಿ: ಕಲಬುರಗಿ ಪಾಲಿಕೆ ಕಚೇರಿಗಳಲ್ಲಿ ಕಚೇರಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, 8 ತಿಂಗಳಿಂದ ಪಗಾರ್ ಕೊಟ್ಟಿಲ್ಲ, ಇದರಿಂದ ಮಕ್ಕಳ ಸಾಲಿ ಫೀ ಕಟ್ಟಕ್ಕಾಗತ್ತಿಲ್ರಿ. ವೇತನ ಕೇಳಿದರೆ ಕೆಲಸ ಬಿಟ್ಟು ಹೋಗಿ ಎನ್ನುತ್ತಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ನಮಗೆ ಪಗಾರ್ ಕೊಡ್ಸಿ ಎಂದು ಗೀತಾ, ಪ್ರೇಮಾ, ವಿಜಯಲಕ್ಷ್ಮಿ, ಯಲ್ಲಮ್ಮ, ನೀಲಮ್ಮ, ರೇಣುಕಾ ಎಂಬ ಕಾರ್ಮಿಕರು ಸಚಿವ ಪ್ರಿಯಾಂಕ್ ಖರ್ಗೆ ಬಳಿ ಅವಲತ್ತುಕೊಂಡರು.
ಕೆಲಸ ಕೊಡಿಸಿ: ಜಿಮ್ಸ್ ಆಸ್ಪತ್ರೆಯಲ್ಲಿ 20 ವರ್ಷದಿಂದ ಗ್ರೂಪ್ ಡಿ ಸಿಬ್ಬಂದಿಗಳಾಗಿ ಹೊರಗುತ್ತಿಗೆ ಮೂಲಕ ಕೆಲಸ ಮಾಡಿದ್ದೇವೆ. ಕೊವಿಡ್ ಪೂರ್ವ ಕೆಲಸದಿಂದ ತೆಗೆದು ಕೋವಿಡ್ ಸಂದರ್ಭದಲ್ಲಿ ಸೇವೆ ಪಡೆದಿದ್ದಾರೆ. ಕೋವಿಡ್ ನಂತರ ಪುನಹ 2 ವರ್ಷ ಹಿಂದೆ ತಮ್ಮನ್ನು ಕೆಲಸದಿಂದ ತೆಗೆದಿದ್ದಾರೆ. ನಮಗೆ ಮತ್ತೆ ಕೆಲಸ ಕೊಡಿಸಿ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರ ಶಿಫಾರಸ್ಸು ಪತ್ರದೊಂದಿಗೆ ಸಚಿವರಿಗೆ ಪುಷ್ಪ, ಶಾಂತಾಬಾಯಿ, ಬಸಮ್ಮ, ಚಂದ್ರಕಲಾ ಅರ್ಜಿ ಸಲ್ಲಿಸಿದರು. ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್. ಅವರಿಗೆ ಸಚಿವರು ಪತ್ರ ನೀಡಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು.
ನಮಗೂ ಒಂದು ಸರ್ಕಾರಿ ಸವಲತ್ತು ಸಿಕ್ಕಿಲ್ರಿ: ಕಿರಾಣಾ ಅಂಗಡಿ ನಡೆಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿನಿ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಇದೂವರೆಗೆ ನಮಗೆ ಯಾವುದೇ ಸರ್ಕಾರಿ ಸವಲತ್ತು ಸಿಕ್ಕಿಲ್ಲ. ಉಳ್ಳವರಿಗೆ ಮಾತ್ರ ಇಂತಹ ಸೌಲಭ್ಯ ಸಿಕ್ತಾವ್ರಿ. ನಮಗೂ ಸೌಲಭ್ಯ ಕೊಡಸಿ ಎಂದು ಕಮಲಾಪೂರ ತಾಲೂಕಿನ ಹರಕಂಚಿ ಗ್ರಾಮದ ರುಕ್ಮಿಣಿ ಭೀಮಶಾ, ಆಳಂದ ತಾಲೂಕಿನ ಸಾವಳಗಿ(ಕೆ) ಗ್ರಾಮದ ಲಲಿತಾಬಾಯಿ ಸಚಿವರಿಗೆ ಕೇಳಿಕೊಂಡರು, ಸಾಲ ನೀಡಲು ಅಧಿಕಾರಿಗಳಿಗೆ ನಿರ್ದೇಶನ ಮಾಡುವುದಾಗಿ ಸಚಿವರ ಭರವಸೆ ನೀಡಿದರು.
ಜೆಸ್ಕಾಂ ಕಾಳಗಿ ಕಚೇರಿಯಲ್ಲಿ 15 ವರ್ಷ ಅಪರೇಟರ್ ಆಗಿ ಕೆಲಸ ಮಾಡಿರುವೆ. ಅಧಿಕಾರಿ ಮತ್ತು ಗುತ್ತಿಗೆದಾರರ ಕುತಂತ್ರದಿಂದ ನನ್ನನ್ನು ಕೆಲಸದಿಂದ ತೆಗೆದಿದ್ದಾರೆ. ಮತ್ತೆ ತಮಗೆ ಕೆಲಸ ಕೊಡ್ಸಿ ಎಂದು ಹೆಬ್ಬಾಳ ಗ್ರಾಮದ ಚಂದ್ರಕಾಂತ ಸಾಯಬಣ್ಣಾ ಸಚಿವರಿಗೆ ಮನವಿ ಮಾಡಿದಾಗ, ಅಲ್ಲಿಯೆ ಇದ್ದ ಜೆಸ್ಕಾಂ ಅಧಿಕಾರಿಗೆ ಸಮಸ್ಯೆ ಬಗೆಹರಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.
ನಂದೂರ (ಕೆ) ಗ್ರಾಮದ ಗೃಹಿಣಿ ಗೀತಾ ಅವರು ತಾವು ಡಿ.ಎಡ್ ಉತ್ತೀರ್ಣವಾಗಿದ್ದು, ಎಲ್ಲಾದರು ಹೊರಗುತ್ತಿಗೆ ಮೂಲಕ ಕೆಲಸ ಒದಗಿಸಬೇಕೆಂದು ಜನಸ್ಪಂದನದಲ್ಲಿ ಸಚಿವರಲ್ಲಿ ಕೋರಿಕೊಂಡರು.
ಅರ್ಜುಣಗಿಯಲ್ಲಿ ಬುದ್ಧ ವಿಹಾರ ಸ್ಥಾಪಿಸಿ: ಗ್ರಾಮದ ಸರ್ವೆ ನಂಬರ್ 3ರಲ್ಲಿ 1 ಎಕರೆ 20 ಗುಂಟೆ ಪ್ರದೇಶದಲ್ಲಿ ಬುದ್ದವಿಹಾರ ನಿರ್ಮಾಣಕ್ಕೆ ಶಾಸಕ ಎಂ.ವೈ.ಪಾಟೀಲ ಅವರು ಈಗಾಗಲೆ ತಹಶೀಲ್ದಾರರಿಗೆ ಪತ್ರ ಬರೆದಿದ್ದಾರೆ. ಕೂಡಲೆ ಅಲ್ಲಿ ಬುದ್ದ ವಿಹಾರ ನಿರ್ಮಿಸಬೇಕು ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ಭೀಮಶಾ ದೊಡ್ಮನಿ ಮನವಿ ಮಾಡಿದರು.
ಮನೆ ಕೊಡಿಸಿ: ತನಗೆ ಆರು ಜನ ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ. ತಾನು ಸೇರಿದಂತೆ ಮಕ್ಕಳೆಲ್ಲ ಕೂಲಿ ಕೆಲಸ ಮಾಡಿ ಬದುಕುತ್ತಿದ್ದೇವೆ. ಮಳೆ ಬಂದ್ರೆ ಮನೆಗೆಲ್ಲ ಮೋರಿ ನೀರು ಬರ್ತಾವ್ರಿ. ಹಿಂದೆಲ್ಲ ರೊಕ್ಕ ತಿಂದು ಮನೆ ಕೊಡಿಸ್ತೀನಿ ಅಂದ್ರು ಕೊಡಸಿಲಿಲ್ರಿ. ನಮಗೊಂದು ಮನೆ ಕೊಡಿಸಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎದುರು ಅಳುತ್ತಾ ನಾಗನಹಳ್ಳಿಯ ಕಾರ್ಮಿಕ ಮಹಿಳೆ ಪಾರ್ವತಿ ಮನವಿ ಮಾಡಿಕೊಂಡರು. ಸಚಿವರು ಇದಕ್ಕೆ ಸ್ಪಂದಿಸಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಗೌಡ ಹಳಿಮನಿ ಅವರಿಗೆ ಅರ್ಜಿಯನ್ನು ಸೂಕ್ತವಾಗಿ ಪರಿಗಣಿಸುವಂತೆ ಸೂಚಿಸಿದರು.
28 ಸ್ಟಾಲ್ ಸ್ಥಾಪನೆ: ಜನಸ್ಪಂದನ ಸಭೆ ಹಿನ್ನೆಲೆಯಲ್ಲಿ ಕಂದಾಯ, ಕಾರ್ಮಿಕ, ಕೃಷಿ, ಸಮಾಜ ಕಲ್ಯಾಣ, ಆಹಾರ, ತೋಟಗಾರಿಕೆ, ಆರೋಗ್ಯ ಹೀಗೆ ಸುಮಾರು 28 ಇಲಾಖೆಗಳೀಂದ ಸ್ಟಾಲ್ ಹಾಕಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಆಯಾ ಇಲಾಖೆಗಳ ಜನಪರ ಯೋಜನೆ ಕುರಿತು ಸಹ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು..
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ, ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಕರ್ನಾಟಕ ರೇμÉ್ಮ ಉದ್ಯಮಗಳ ನಿಗಮ ನಿಯಮಿತದ ಅಧ್ಯಕ್ಷರು ಮತ್ತು ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಅಪಜಲಪೂರ ಶಾಸಕ ಎಂ.ವೈ.ಪಾಟೀಲ, ಎಂ.ಎಲ್.ಸಿ.ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಅಲಮ್ ಖಾನ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ ಅಕ್ಷಯ್ ಎಂ. ಹಾಕೆ, ಜಿಲ್ಲಾ ಪಂಚಾಯತ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಡಿ.ಸಿ.ಎಫ್ ಸುಮಿತ್ ಪಾಟೀಲ ದೇವಿದಾಸ್ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರೆ ಚುನಾಯಿತ ಜನಪ್ರತಿನಿಧಿಗಳು ಇದ್ದರು.